ಕನಕಪುರ: ಅಗತ್ಯ ಮಾಹಿತಿ ನೀಡುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಚಾಕನಹಳ್ಳಿ ಗ್ರಾಮ ಪಂಚಾಯಿತಿಯ ವಿರುಪಸಂದ್ರ ಗ್ರಾಮದ ಸದಸ್ಯೆ ಸಾವಿತ್ರಮ್ಮ ಕೋಂ ಮಂಚೇಗೌಡ ಆರೋಪಿಸಿದ್ದಾರೆ.
ಚಾಕನಹಳ್ಳಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಪಂಚಾಯಿತಿಯಲ್ಲಿ ಯಾವುದೇ ವಿಷಯವನ್ನು ಸದಸ್ಯರ ಗಮನಕ್ಕೆ ತಾರದೆ ಮತ್ತು ಅಭಿಪ್ರಾಯ ಪಡೆಯದೆ ತಾವೇ ಎಲ್ಲವನ್ನೂ ನಿರ್ಧರಿಸುತ್ತಾರೆ. ಆಶ್ರಯ ಮನೆ ಹಂಚಿಕೆಯಲ್ಲಿ ಅವರು ತಾರತಮ್ಯ ಎಸಗಿದ್ದಾರೆ. ಫಲಾನುಭವಿಗಳಿಗೆ ಚೆಕ್ ವಿತರಿಸುವಾಗ ತಲಾ 1 ಸಾವಿರ ರೂಪಾ ಯಿ ಲಂಚ ಪಡೆದಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
`ಪ್ರತಿ ತಿಂಗಳು ನಡೆಯುವ ಸಾಮಾನ್ಯ ಸಭೆ, 6 ತಿಂಗಳಿಗೆ ನಡೆಯುವ ಗ್ರಾಮಸಭೆ, ವಿಶೇಷ ಸಭೆಗೆ ಅವರು ಆಹ್ವಾನ ಪತ್ರಿಕೆಯನ್ನೇ ಕಳಿಸುವುದಿಲ್ಲ. ಸಭೆಗೂ ಆಹ್ವಾನಿಸುವುದಿಲ್ಲ. ಇದರಿಂದ ಪಂಚಾಯಿತಿಯಲ್ಲಿ ಏನು ನಡೆಯುತ್ತಿದೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ.
ಶಿವಕುಮಾರ್ ಮತ್ತು ಕರವಸೂಲಿಗಾರ ರಾಜು ಇವರಿಬ್ಬರೂ ಪಂಚಾಯಿತಿಯ ಅಧಿಕಾರ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ನಿಸ್ಸಹಾಯಕರಾಗಿದ್ದಾರೆ~ ಎಂದು ಅವರು ಹೇಳಿಕೆಯಲ್ಲಿ ಅಲವತ್ತುಕೊಂಡಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.