ADVERTISEMENT

`ಸಮಾಜ ಸೇವೆಗೆ ಫಲಾಪೇಕ್ಷೆ ಬೇಡ'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:32 IST
Last Updated 3 ಸೆಪ್ಟೆಂಬರ್ 2013, 6:32 IST

ರಾಮನಗರ: `ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬರುವ ಟ್ರಸ್ಟ್‌ಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು' ಎಂದು ಚಿಂತಕ ಪಿ.ಜೆ. ಗೋವಿಂದರಾಜು ತಿಳಿಸಿದರು.

ನಗರದ ರಾಮದುರ್ಗ ಪ್ರೌಢಶಾಲೆಯಲ್ಲಿ ನಡೆದ ಸಂಚಲನ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಸಮಾಜದ ಅಸಮಾನತೆ, ಮೌಢ್ಯತೆ, ಜಾತೀಯತೆಯನ್ನು ಹೋಗಲಾಡಿಸಲು ಟ್ರಸ್ಟ್‌ಗಳು ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಲ್ಲಿ ಅರಿವು ಮೂಡಿಸಬೇಕು' ಎಂದು ತಿಳಿಸಿದರು.

ಸಾಹಿತಿ ಎಸ್. ಸುಮಂಗಳಾ ಹಾರೋಕೊಪ್ಪ ಮಾತನಾಡಿ, `ಟ್ರಸ್ಟ್‌ಗಳು ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಮುಖವಾಗುತ್ತಿರುವ ಯುವ ಸಮುದಾಯದ ಗಮನ ಸೆಳೆಯುವ ಕಾರ್ಯಕ್ರಮಗಳನ್ನು ರೂಪಿಸಬೇಕು' ಎಂದು ಅವರು ತಿಳಿಸಿದರು.

ಬೆಂಗಳೂರಿನ ಗುಡ್‌ವಿಲ್ ಕಾಲೇಜಿನ ಕನ್ನಡ ಅಧ್ಯಾಪಕಿ ಡಾ.ಕೆ. ತೇಜಾವತಿ ಮಾತನಾಡಿ, `ದೇಶಿ ಸಂಸ್ಕೃತಿ, ಕಲೆಗಳಿಗೆ ವಿದೇಶಗಳಲ್ಲಿ ಮನ್ನಣೆ ದೊರೆಯುತ್ತಿದೆ. ಆದರೆ ನಮ್ಮಲ್ಲೇ ಕಲೆಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕಲೆಗಳು ಜೀವಂತಿಕೆಯನ್ನು ಉಳಿಸಿಕೊಂಡಿವೆ' ಎಂದರು.

ಸಂಚಲನ ಟ್ರಸ್ಟ್ ಕಾರ್ಯದರ್ಶಿ ವಿ. ಆನಂದ್ ಮಾತನಾಡಿ, `ಗ್ರಾಮೀಣ ಭಾಗದ ಮಕ್ಕಳಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಆಸಕ್ತಿ ಮೂಡಿಸಲು ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು' ಎಂದು ತಿಳಿಸಿದರು.
ಗಾಯಕ ಬಿ.ವಿನಯ್‌ಕುಮಾರ್ ಅವರಿಂದ ಗೀತಗಾಯನ ಏರ್ಪಡಿಸಲಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದ ಪುರಸ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ಕಾನೂನು ಕಾಲೇಜಿನ ಪ್ರಾಧ್ಯಾಪಕ ಜಯಣ್ಣ, ಹಿರಿಯ ಆರೋಗ್ಯ ಪರಿವೀಕ್ಷಕ ಬಿ.ಎಸ್. ಗಂಗಾಧರ್, ರಾಮದುರ್ಗ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಕೆ. ಕೃಷ್ಣ, ಸಮತಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಲ್. ಕಿರಣ್, ನಗರ ಸಭೆಯ ಮಾಜಿ ಸದಸ್ಯೆ ಬಿ.ಶಾಂತಕುಮಾರಿ, ಟ್ರಸ್ಟ್ ಅಧ್ಯಕ್ಷೆ ಗೌರಮ್ಮ, ಖಜಾಂಚಿ ಕೆ.ಎಸ್. ಸರ್ವಮಂಗಳಾ, ಸದಸ್ಯರಾದ ಸತ್ಯವತಿ, ಮೀನಾಕ್ಷಿ, ಪ್ರೇಮಾ, ಆಂಜಪ್ಪ ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕಾವ್ಯಾ ಪ್ರಾರ್ಥಿಸಿದರು. ಕಲಾವಿದ ಸುಂದರೇಶ್ ಸ್ವಾಗತಿಸಿದರು.  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಲ್. ಸುರೇಶ್ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.