ADVERTISEMENT

ಸಿ.ಪಿ.ಯೋಗೀಶ್ವರ್ ವಿರುದ್ಧ: ಜೆಡಿಎಸ್ ಶಾಸಕರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ರಾಮನಗರ: ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಸಚಿವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಶಾಸಕ ಕೆ.ರಾಜು ಮತ್ತು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು.

ಸಚಿವರು ಕೊಳವೆ ಬಾವಿ ಕೊರೆದಿರುವ ಗುತ್ತಿಗೆದಾರರ ಬಿಲ್‌ಗಳನ್ನು ತಡೆ ಹಿಡಿಯುವಂತೆ ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಟಿಪ್ಪಣಿ ನೀಡಿರುವುದರ ಹಿಂದಿನ ಉದ್ದೇಶ ಏನು ಎಂದು ಅವರು ಶನಿವಾರ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಯೋಗೀಶ್ವರ್ ವಿರುದ್ಧ ಕೆಲಸ ಮಾಡಿದ ಗುತ್ತಿಗೆದಾರ ರಾಜೇಶ್ ಎಂಬುವರ ಬಿಲ್‌ಗಳನ್ನು ತಡೆಹಿಡಿಯುವ ನಿಟ್ಟಿನಲ್ಲಿ ಸಚಿವರು ಈ ರೀತಿ ಲಿಖಿತ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಇದು ಅವರ ಘನತೆಗೆ ಶೋಭೆ ತರುವಂತಹ ಕೆಲಸವಲ್ಲ ಎಂದು  ದೂರಿದರು.

ಗುತ್ತಿಗೆದಾರರು ಕೈಗೊಂಡಿರುವ ಕಾಮಗಾರಿಯಲ್ಲಿ ಲೋಪದೋಷ, ಕಳಪೆ ಕಾಮಗಾರಿಯಾಗಿದ್ದರೆ ಅದನ್ನು ತನಿಖೆ ನಡೆಸಿ, ಪರಿಶೀಲಿಸಿ ಕ್ರಮ ತೆಗೆದುಕೊಂಡರೆ ಅಭ್ಯಂತರ ಇಲ್ಲ. ಆದರೆ ಕೆಟ್ಟ ಉದ್ದೇಶ ಇಟ್ಟುಕೊಂಡು ಗುತ್ತಿಗೆದಾರರಿಗೆ ಕಿರುಕುಳ ಮಾಡಿದರೆ, ಜಿಲ್ಲೆಯ ಅಭಿವೃದ್ಧಿ ಕೆಲಸ ಹೇಗಾಗುತ್ತವೆ ಎಂದರು. 

 ಜಿಲ್ಲೆಯಲ್ಲಿ ಎದುರಾಗಲಿರುವ ನೀರಿನ ಬವಣೆ ನಿವಾರಣೆಗೆ ಸಚಿವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ತಿಂಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆನೆಗಳ ದಾಳಿ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ರೈತರ ಬೆಳೆ ನಾಶವಾಗುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯೋಗೀಶ್ವರ್‌ಅವರು ಸೌಜನ್ಯಕ್ಕೂ ಒಂದು ಸಭೆ ನಡೆಸಲಿಲ್ಲ ಎಂದು ದೂರಿದರು.

ಸಚಿವರು ಕಾನೂನು ಅರಿತು ಕೆಲಸ ಮಾಡಿದರೆ ಸೂಕ್ತ. ಇಲ್ಲದಿದ್ದರೆ ಸಚಿವರ ಮನೆ ಮತ್ತು ಕಚೇರಿ ಮುಂಭಾಗ ಪ್ರತಿಭಟನಾ, ಧರಣಿಗಳನ್ನು ಮಾಡಬೇಕಾಗುತ್ತದೆ ಎಂದು  ಎಚ್ಚರಿಸಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೂಟಗಲ್ ದೇವೇಗೌಡ, ತಾ.ಪಂ. ಸದಸ್ಯ ಶಿವಪ್ರಸಾದ್ ಉಪಸ್ಥಿತರಿದ್ದರು.

ಸಿ.ಎಂ. ಸದಾನಂದಗೌಡರಿಗೆ ಅಭಿನಂದನೆ
ಜಿಲ್ಲೆಯ ಜನತೆಗೆ ಕುಡಿಯುವ ನೀರು ಮತ್ತು ಸಮಗ್ರ ನೀರಾವರಿ ಯೋಜನೆಗೆ ಉಪಯುಕ್ತವಾಗುವ ಎತ್ತಿನಹೊಳೆ ಯೋಜನೆ ಮತ್ತು ಪರಮಶಿವಯ್ಯ ಅವರ ವರದಿಯನ್ನು ಯತಾವತ್ತಾಗಿ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಿ, ಅದಕ್ಕೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಿರುವ  ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಅಭಿನಂದಿಸುವುದಾಗಿ ಶಾಸಕರಾದ ಎಚ್.ಸಿ.ಬಾಲಕೃಷ್ಣ ಮತ್ತು ಕೆ.ರಾಜು ಹೇಳಿದರು.

ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಜಿಲ್ಲೆಗೆ 24 ಟಿಎಂಸಿ ಹಾಗೂ ಪರಮಶಿವಯ್ಯ ವರದಿ ಅನುಷ್ಠಾನವಾದರೆ 149 ಟಿಎಂಸಿ ನೀರು ಲಭ್ಯವಾಗುತ್ತದೆ. ಆಗ ಇಡೀ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿ, ನೀರಾವರಿ ಸಮಸ್ಯೆಯಾಗಲಿ ಎದುರಾಗುವುದಿಲ್ಲ ಎಂದು ಅವರು ತಿಳಿಸಿದರು.

ಎತ್ತಿನಹೊಳೆಯಿಂದ ಕಣ್ವಕ್ಕೆ ನೀರು ಬಂದರೆ, ಅಲ್ಲಿಂದ ಕೂಟಗಲ್ ಹೋಬಳಿಯ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ. ಮಂಚನಬೆಲೆ ಮತ್ತು ವೈ.ಜಿ.ಗುಡ್ಡದಿಂದ 50 ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆ ಅಂತಿಮ ಹಂತದಲ್ಲಿದೆ. ಸಾವನದುರ್ಗದಲ್ಲಿ ಡಾಂಬರೀಕರಣ, ರಸ್ತೆ ಅಗಲೀಕರಣಕ್ಕೆ 10 ಕೊಟಿ ರೂಪಾಯಿ ಮಂಜೂರಾಗಿದೆ. ಮಂಚನಬೆಲೆ ಡ್ಯಾಂ ಮುಂಭಾಗ ಉದ್ಯಾನ ನಿರ್ಮಿಸಲು 1 ಕೋಟಿ ರೂಪಾಯಿ ಒದಗಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.