ADVERTISEMENT

ಹಲ್ಲೆಗೆ ಪಿಎಸ್‌ಐ ವರ್ತನೆಯೇ ಕಾರಣ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಚನ್ನಪಟ್ಟಣ: ಪಟ್ಟಣದ ಶೇರ್ವಾ ಹೋಟೆಲ್ ಸರ್ಕಲ್‌ನಲ್ಲಿ ಮಂಗಳವಾರ ರಾತ್ರಿ ಪಿಎಸ್‌ಐ ಪ್ರಕಾಶ್ ಪೊಲೀಸ್ ಮೇಲೆ ನಡೆದ ಹಲ್ಲೆ, ಅವರ ಹದ್ದುಮೀರಿದ ವರ್ತನೆಯೇ ಕಾರಣ ಎಂದು ತಾಲ್ಲೂಕು ಜೆಡಿಎಸ್ ಮುಖಂಡರು ಆರೋಪಿಸಿದರು.

ಗುರುವಾರದಂದು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಜೆಡಿಎಸ್ ನಾಯಕ ಸಿಂ.ಲಿಂ.ನಾಗರಾಜು, ಸಾರ್ವಜನಿಕರು ಹಲ್ಲೆಮಾಡಿದರೆ 307 ಅಡಿ ಪ್ರಕರಣ ದಾಖಲಿಸುತ್ತಾರೆ. ಸಾರ್ವಜನಿಕರಿಗೆ ಪೊಲೀಸರು ದುರುದ್ದೇಶಪೂರ್ವಕವಾಗಿ ಹಲ್ಲೆಮಾಡಿದರೆ ಯಾವ ಪ್ರಕರಣ ದಾಖಲಿಸುತ್ತಾರೆ ಎಂದು ಪ್ರಶ್ನಿಸಿದರು.

 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಪ್ರಕಾಶ್ ಅವರ ಕಾರಿಗೆ ದಾರಿ ಬಿಡಲಿಲ್ಲವೆಂದು ಕೆರಳಿದ ಪಿಎಸ್‌ಐ ಬಸ್ ಅಡ್ಡಗಟ್ಟಿ ಚಾಲಕನಿಗೆ ಥಳಿಸುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಚಾಲಕನಿಗೆ ಚಿಕಿತ್ಸೆ ಮಾಡಿ ಪ್ರಯಾಣಿಕರನ್ನು ಸಂತೈಸುತ್ತಿದ್ದರು. ಇದರಿಂದ ಕೆರಳಿದ ಪಿಎಸ್‌ಐ ಪ್ರಕಾಶ್, ಅಲ್ಲಿನ ಟೀ ಹೋಟೆಲ್ ಮಾಲೀಕರೊಂದಿಗೆ ಅಸಭ್ಯವಾಗಿ ವರ್ತಿಸಿದರು. ಅಮಾನುಷ ಹಲ್ಲೆನಡೆಸಿ ಹೋಟೆಲ್‌ನಲ್ಲಿದ್ದ ಟೀ, ಹಾಲು ಇನ್ನಿತರ ವಸ್ತುಗಳನ್ನು ಚೆಲ್ಲಾಡಿ ದುಂಡಾವರ್ತನೆ ನಡೆಸಿದರು.

ಘಟನೆಯ ಬಗ್ಗೆ ಕೆಲಮಂದಿ ಪ್ರಶ್ನಿಸಿದಾಗ ಅವರೊಂದಿಗೂ ಕಾದಾಟಕ್ಕಿಳಿದರು. ಮಾತಿಗೆ ಮಾತು ಬೆಳೆದು ಪರಸ್ಪರ ಕೈಮಿಲಾಯಿಸಿದ್ದಾರೆ. ಆದರೆ ಅಮಾಯಕರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಇದೆಕ್ಕೆಲ್ಲ ಕಾರಣರಾದ ಪಿಎಸ್‌ಐ ಪ್ರಕಾಶ್ ಮೇಲೆ ಯಾವ ಪ್ರಕರಣ ದಾಖಲಿಸುತ್ತಾರೆ ಎಂದು ನಾಗರಾಜ್ ಕೇಳಿದರು.

ಘಟನೆ ನಡೆದು ಮೂರು ದಿನಗಳು ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಸಿ.ಪಿ.ಯೋಗೀಶ್ವರ್, ಅಧಿಕಾರಿಗಳು  ಹಾಗೂ ಸಾರ್ವಜನಿಕರ ನಡುವೆ  ಸಾಮರಸ್ಯ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿಯಿಂದ ಅವರು ಬಿಡುಗಡೆಗೊಳಿಸಬೇಕೆಂದು ಸಿಂ.ಲಿಂ.ನಾಗರಾಜು ಆಗ್ರಹಿಸಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ಮಾತನಾಡಿ,`ಈಗಾಗಲೇ ಸುಮಾರು 14ಮಂದಿ ಅಮಾಯಕರನ್ನು ಬಂಧಿಸಿರುವ ಪೊಲೀಸರು ಮತ್ತೆ ಇದೇ ಆರೋಪದ ಮೇಲೆ ಇನ್ನು 45ಮಂದಿಯ ಪಟ್ಟಿ ತಯಾರಿಸಿದ್ದು ತಮಗಾಗದವರನ್ನು ಬಂಧಿಸುವ ಬೆದರಿಕೆ ಒಡ್ಡಿದ್ದಾರೆ~ ಎಂದು ತಿಳಿಸಿದರು.

ನಗರಸಭಾ ಸದಸ್ಯ ಜಬೀವುಲ್ಲಾಖಾನ್ ಘೋರಿ, ಮಾತನಾಡಿ ಪಿ ಎಸ್‌ಐ ಪ್ರಕಾಶ್ ದುರ್ವತನೆ ಬಗ್ಗೆ  ಸಾರ್ವಜನಿಕರು ಒಂದು ತಿಂಗಳ ಹಿಂದೆಯೇ ಇವರನ್ನು ವರ್ಗಾವಣೆ ಮಾಡಿ ಎಂದು ಸಚಿವ ಯೋಗೀಶ್ವರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಅದು ಯಾವುದೇ ಪ್ರಯೋಜನವಾಗಲಿಲ್ಲವೆಂದು ತಿಳಿಸಿದರು. 

ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಜಯಮ್ಮ, ಸದಸ್ಯರಾದ ಚನ್ನಗಿರಿಗೌಡ, ಕೆ.ಪಿ. ಕಾಂತರಾಜು, ನಗರಸಭಾ ಸದಸ್ಯ ಬಸವರಾಜು, ಮಾಜಿ ಸದಸ್ಯ ಉಮಾಶಂಕರ್ ಬೋರ್‌ವೆಲ್ ರಾಮಚಂದ್ರು, ರಾಂಪುರ ಧರಣೀಶ್, ಸದಾನಂದ, ಎಂ.ಜಿ.ಕೆ. ಪ್ರಕಾಶ್ ಉಮೇಶ್, ಕೂರಣಗೆರೆ ರವಿ, ಮಹರೀಶ್, ಕೆಂಚೇಗೌಡ, ಮಾಕಳಿ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.