ADVERTISEMENT

‘ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ನಿಶ್ಚಿತ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:39 IST
Last Updated 26 ಸೆಪ್ಟೆಂಬರ್ 2013, 6:39 IST

ಚನ್ನಪಟ್ಟಣ:  ದಿನಕಳೆದಂತೆ ಪರಿಸರ ಮಾಲಿನ್ಯ ತೀವ್ರವಾಗುತ್ತಿದ್ದು, ಮನುಷ್ಯ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಖಂಡಿತ ಎಂದು ಪಟ್ಟಣದ ಮಾತಾ ಆಸ್ಪತ್ರೆಯ ಮೂಳೆರೋಗ ತಜ್ಞ ಡಾ.  ಆರ್.ಎನ್.ಮಲವೇಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ರಾಂಪುರ ಗ್ರಾಮದ ಸಮುದಾಯ ಭವನದಲ್ಲಿ ಸನ್‌ರೈಸ್‌ ಯುವ ಟ್ರಸ್ಟ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇತ್ತೀಚಿಗೆ ಏರ್ಪಡಿಸಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಹಾಗೂ ಅರಣ್ಯ ಸಂರಕ್ಷಣಾ ಜಾಗೃತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ತನ್ನ ಜೀವಿತದ ಅವಧಿ ಯಲ್ಲಿ ವರ್ಷಕ್ಕೆ ಒಂದರಂತೆ ಗಿಡನೆಟ್ಟು ಅದನ್ನು ಬೆಳೆಸಿ ಪೋಷಿಸುವ ಜವಾ ಬ್ದಾರಿ ಹೊರಬೇಕು. ಆ ಮೂಲಕ ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ನಾಶಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.

ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ‘ತಾಲ್ಲೂಕಿನಲ್ಲಿ ಕಣ್ವ ಜಲಾಶಯ ನಿರ್ಮಿಸಿ ತಾಲ್ಲೂಕಿನ ರೈತರ ಬದುಕಿಗೆ ಹೊಸ ಆಯಾಮ ನೀಡಿದವರು ವಿಶ್ವೇಶ್ವರಯ್ಯ’ ಎಂದು ಬಣ್ಣಿಸಿದರು.

ಪಿ.ಎಲ್.ಡಿ. ಬ್ಯಾಂಕ್‌ನ ಮಾಜಿ ನಿರ್ದೇಶಕ ಧರಣೀಶ್‌ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ತಾ.ಪಂ. ಸದಸ್ಯ ಆರ್.ಎಂ.ಮಲವೇಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಆರ್.ಬಿ. ಸ್ವಾಮಿ, ರಾಂಪುರ ಗ್ರಾ.ಪಂ.ಅಧ್ಯಕ್ಷೆ ಉಷಾ ಶಿವರಾಜು, ಗ್ರಾ.ಪಂ. ಸದಸ್ಯ ಆರ್.ಎಸ್.ವೆಂಕಟೇಶ್, ಸರ್ಕಾರಿ ದಿನಗೂಲಿ ಹೋರಾಟಗಾರರ ಸಮಿತಿ ಯ ಕೃಷ್ಣ ಹಾಜರಿದ್ದರು.

ಗಾಯಕರಾದ ಹೊನ್ನಿಗನಹಳ್ಳಿ ಸಿದ್ದರಾಜು, ಮಾರುತಿ ಕುಮಾರ್, ಡಿ.ನಾಗೇಂದ್ರ ಕುಮಾರ್, ಎಲೆಕೇರಿ ರಾಜಶೇಖರ್, ಆರ್.ವಿ.ನವನಿಧಿ. ಮೋಹಿತ್‌ಗೌಡ, ಶ್ರೀನಿವಾಸ್ ಗೀತಗಾಯನ ನಡೆಸಿಕೊಟ್ಟರು.

ತಾಲ್ಲೂಕು ಕಸಾಪ ಕಾರ್ಯದರ್ಶಿ ವಿಜಯ್ ರಾಂಪುರ ಸ್ವಾಗತಿಸಿ, ನಿರೂಪಿಸಿದರು. ಟ್ರಸ್ಟ್‌ನ ಅಧ್ಯಕ್ಷ ಶಂಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.