ರಾಮನಗರ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಶಾಸಕ ಅಶ್ವಥ್ನಾರಾಯಣ ಆರೋಪಿಸಿದರು.
ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ತಾಲ್ಲೂಕಿನ ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಈಗಾಗಲೇ ನಿಗಧಿತ ಸಮಯಕ್ಕೆ ಅನುಗುಣವಾಗಿ ಚುನಾವಣೆ ದಿನಾಂಕ ಪ್ರಕಟಣೆಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಆದರೆ ತಮ್ಮ ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರಿಂದ ನ್ಯಾಯಾಲಯಕ್ಕೆ ಇಲ್ಲಸಲ್ಲದ ದೂರುಗಳನ್ನು ಸಲ್ಲಿಸುವ ಮೂಲಕ ಚುನಾವಣೆ ಮುಂದೂಡಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ದೂರಿದರು.
ನ್ಯಾಯ ಸಮ್ಮತವಾಗಿ ಪಂಚಾಯ್ತಿವಾರು ಕ್ಷೇತ್ರಗಳಲ್ಲಿ ಮೀಸಲಾಗಿ ನಿಗದಿಪಡಿಸಬೇಕಾದ ಸರ್ಕಾರ ವಿನಾಕಾರಣ ಕೆಲವು ಕ್ಷೇತ್ರಗಳಲ್ಲಿ ಮೀಸಲಾತಿ ಗೊಂದಲ ಉಂಟು ಮಾಡಿದ್ದು, ಇದೀಗ ಕೆಲವರು ನ್ಯಾಯಾಲಯದ ಮೆಟ್ಟಿಲೇರಲು ಸರ್ಕಾರವೆ ಕುಮ್ಮಕ್ಕು ನೀಡಿದೆ. ಇದರಿಂದಾಗಿ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಿಗಧಿತ ಸಮಯಕ್ಕೆ ಮಾಡಿದರೆ ಪ್ರತಿ ವರ್ಷ ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗೆ ಕೇಂದ್ರದಿಂದ ರಾಜ್ಯ ಸರಕಾರಕ್ಕೆ 3000 ಕೋಟಿ ಅನುದಾನ ದೊರೆಯಲಿದ್ದು, 5 ವರ್ಷಗಳಲ್ಲಿ 15 ಸಾವಿರ ಕೋಟಿ ಅನುದಾನ ಬಿಡುಗಡೆಯಾಗಲಿದ್ದು ಕೂಡಲೆ ಚುನಾವಣೆ ನಡೆಸಲು ಸರ್ಕಾರ ಕ್ರಮತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ರಾಮನಗರ ಜಿಲ್ಲೆಯ ಜನರನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಕುಟುಂಬ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುತ್ತಿವೆ. ಇಷ್ಟು ದಿನ ಜೆಡಿಎಸ್ ಮಾತ್ರ ಸೀಮಿತವಾಗಿದ್ದ ಕುಟುಂಬ ರಾಜಕೀಯ ಸಂಸ್ಕೃತಿ ಈಗ ಕಾಂಗ್ರೆಸ್‌ಗೂ ಆವರಿಸಿದೆ, ಉಸ್ತುವಾರಿ ಸಚಿವರ ಸೋದರ ಡಿ.ಕೆ.ಸುರೇಶ್ ಸಂದರಾಗಿ, ಸೋದರ ಸಂಬಂಧಿ ಎಸ್. ರವಿ ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ತಿಳಿಸಿದರು.
ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಎರಡೂ ಪಕ್ಷಗಳು ವಿಫಲವಾಗಿವೆ. ಶ್ರೀರಂಗ ಯೋಜನೆ ಮಾಗಡಿಗೆ ಕುಡಿಯುವ ನೀರಿನ ಯೋಜನೆ ಮಾತ್ರ ಆದರೆ ಕಾಂಗ್ರೆಸ್ ಇದನ್ನು ಜಿಲ್ಲೆಗೆ ಸಂಪೂರ್ಣ ನೀರಾವರಿ ಯೋಜನೆ ಕಲ್ಪಿಸಿದಂತೆ ಬಿಂಭಿಸಿಕೊಳ್ಳುತ್ತಿದೆ. ಮುಖ್ಯಮಂತ್ರಿಗಳು ಜಿಲ್ಲೆಯಿಂದ ಉತ್ತಮ ಚುನಾವಣೆ ಫಲಿತಾಂಶವನ್ನು ಮಾತ್ರ ನಿರೀಕ್ಷಿಸುತ್ತಿದ್ದು, ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು 20ಕ್ಕೂ ಹೆಚ್ಚು ಕಾಯಕರ್ತರು ಜಿಲ್ಲಾ ಉಪಾಧ್ಯಕ್ಷ ಎಂ.ಸಿ. ಹನುಮಂತರಾಜು ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಮಾಜಿ ಶಾಸಕ ಕೃಷ್ಣಮೂರ್ತಿ, ಯುವ ಮೋರ್ಚ ರಾಜ್ಯ ಘಟಕದ ಅಧ್ಯಕ್ಷ ಮುನಿರಾಜು, ಶಿವಬೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಿ. ನಾಗರಾಜು, ಹಿರಿಯ ಉಪಾಧ್ಯಕ್ಷ ಎಸ್.ಆರ್. ನಾಗರಾಜು, ವಕಾರ ಪದ್ಮನಾಭ್, , ನಗರ ಘಟಕದ ಅಧ್ಯಕ್ಷ ರುದ್ರದೇವರು, ಮುಖಂಡರಾದ ಸಂಗಬಸವನದೊಡ್ಡಿ ರಾಮಣ್ಣ, ಜಗದೀಶ್, ಜಯಣ್ಣ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.