ADVERTISEMENT

ಒಂದೇ ದಿನ 47 ಪ್ರಕರಣ!

ಜಿಲ್ಲೆಯಲ್ಲಿ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 16:54 IST
Last Updated 1 ಜುಲೈ 2020, 16:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಜಿಲ್ಲೆಯಲ್ಲಿ ಒಂದೇ ದಿನ 47 ಮಂದಿಯಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.

ಬುಧವಾರ ರಾಮನಗರದಲ್ಲಿ 8, ಮಾಗಡಿಯಲ್ಲಿ 37 ಹಾಗೂ ಕನಕಪುರದಲ್ಲಿ 2 ಮಂದಿಗೆ ಸೋಂಕು ತಗುಲಿದೆ. ಮಾಗಡಿಯ ಕಲ್ಯಾಗೇಟ್‌ನ ಐವರು, ರಾಜಕುಮಾರ್‍ ರಸ್ತೆಯ ಮೂವರು, ಹೊಸಪೇಟೆಯ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಲಶೆಟ್ಟಿಹಳ್ಳಿಯಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಆರು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಮೂಲಕ ಮಾಗಡಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 78ಕ್ಕೆ ಏರಿಕೆ ಕಂಡಿದ್ದು, ಅಲ್ಲಿನ ಜನರ ಆತಂಕ ಹೆಚ್ಚಿಸಿದೆ. ಹೀಗಾಗಿ ಮಾಗಡಿಯಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್‌ ಅನ್ನು ಇದೇ 10ರವರೆಗೆ ವಿಸ್ತರಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 79 ಮಂದಿ ಗುಣಮುಖರಾಗಿದ್ದು, ಬುಧವಾರವೂ ಐದು ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 137 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಶಾಸಕರು ಕ್ವಾರಂಟೈನ್: ತಮ್ಮ ಆಪ್ತ ಸಹಾಯಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಾಗಡಿ ಶಾಸಕ ಎ.ಮಂಜುನಾ‌ಥ್‌ ತಾವೂ ಪರೀಕ್ಷೆಗೆ ಮಾಡಿಸಿಕೊಂಡಿದ್ದು, ಖುದ್ದಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಜನರು ಭೇಟಿ ಮಾಡಲು ಬರದಂತೆ ಕೋರಿದ್ದಾರೆ.

ಪೊಲೀಸ್‌ಗೂ ಸೋಂಕು: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್‌ ಒಬ್ಬರಿಗೂ ಸೋಂಕು ತಗುಲಿದೆ. ಅವರ ಸಂಪರ್ಕದಲ್ಲಿದ್ದ 12 ಮಂದಿ ಸಿಬ್ಬಂದಿ ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ. ಮಂಗಳವಾರ ಮತ್ತೊಬ್ಬರು ಪೊಲೀಸ್‌ ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.