ADVERTISEMENT

ಹೊಂದಾಣಿಕೆ ರಾಜಕಾರಣಕ್ಕೆ ಅಂಜಲ್ಲ: ಸಿಪಿವೈ

ಇಬ್ಬರೂ ನಾಯಕರ ನಡುವೆ 15 ವರ್ಷಗಳಿಂದ ಒಳ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 11:47 IST
Last Updated 18 ಜನವರಿ 2018, 11:47 IST

ಚನ್ನಪಟ್ಟಣ: ‘ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ,ಕೆ. ಶಿವಕುಮಾರ್ ನಡುವಿನ ಹೊಂದಾಣಿಕೆ ರಾಜಕಾರಣ ಹೊಸತೇನಲ್ಲ. ಇಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ನನಗೆ ಭಯವಿಲ್ಲ’ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದರು.

ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿನ ಇಬ್ಬರೂ ನಾಯಕರು ಕಳೆದ ಹದಿನೈದು ವರ್ಷಗಳಿಂದ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಈ ಬಾರಿಯ ನೇರ ಹೊಂದಣಿಕೆಗೆ ಹಿರಿಯರಾದ ಎಚ್.ಡಿ. ದೇವೇಗೌಡರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಇಲ್ಲಿನ ಸ್ವಾಭಿಮಾನಿ ಜನರು ನನ್ನನ್ನೇ ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇಂದು ಇಲ್ಲಿ ಸೇರಿದ ಜನಸ್ತೋಮ, ನಮ್ಮ ಒಗ್ಗಟ್ಟು ವಿರೋಧಿಗಳಿಗೆ ತಕ್ಕ ಉತ್ತರ ನೀಡಿದೆ. ಇಡೀ ತಾಲ್ಲೂಕಿನ ಜನತೆಯ ಒಗ್ಗಟ್ಟು ಮುರಿಯಲು ಅವರು ಹಣ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡರು. ಆದರೂ ಇಲ್ಲಿನ ಸ್ವಾಭಿಮಾನಿಗಳು ಅದಕ್ಕೆ ಆಸ್ಪದ ಕೊಟ್ಟಿಲ್ಲ’ ಎಂದರು.

ADVERTISEMENT

ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಸಿರು ನಿಶಾನೆ ತೋರಿದ್ದರಿಂದಲೇ ಇಂದು ಚನ್ನಪಟ್ಟಣದಲ್ಲಿ ನೀರಾವರಿ ಕ್ರಾಂತಿ ಆಗಿದೆ. ಹೀಗಾಗಿ ತಾಲ್ಲೂಕಿನ ಜನತೆಯ ಮೇಲೆ ಅವರ ಋಣ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕೆಆರ್ಎಸ್‌ನಿಂದ ಮಾರ್ಕಂಡಳ್ಳಿ ಜಲಾಶಯದವರೆಗೆ ಗುರುತ್ವಾಕರ್ಷಣೆ ಬಲದಿಂದಲೇ ಕಾವೇರಿ ನೀರು ತರುವ ಕನಸು ಹೊಂದಿದ್ದೇನೆ. ಇದು ಸಕಾರಗೊಂಡಲ್ಲಿ ನಾಲ್ಕು ಜಿಲ್ಲೆಗಳ 1500ಕ್ಕೂ ಹೆಚ್ಚು ಕೆರೆಗಳು ತುಂಬುವ ಜೊತೆಗೆ ಕಣ್ವ, ಶಿಂಷಾ, ಅರ್ಕಾವತಿ, ವೃಷಭಾವತಿಗೆ ಜೀವ ಬರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.