ADVERTISEMENT

ಸಮ್ಮೇಳನಕ್ಕೆ ಮೆರುಗು ತಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 6:55 IST
Last Updated 1 ಫೆಬ್ರುವರಿ 2018, 6:55 IST

ಶಾನಬೋಗನಹಳ್ಳಿ (ರಾಮನಗರ): ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಬುಧವಾರ ಇಲ್ಲಿನ ಅರುಣೋದಯ ಪಬ್ಲಿಕ್‌ ಶಾಲೆಯ ಮುಂಭಾಗದಿಂದ ಸರ್ಕಾರಿ ಪ್ರೌಢಶಾಲೆಯ ಆವರಣದವರೆಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಜರುಗಿತು.

ಮೆರವಣಿಗೆಗೆ ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್‌ ಚಾಲನೆ ನೀಡಿದರು. ವೀರಯೋಧ ತಿರುಮಲೇಶ್‌ ಪ್ರತಿಮೆಗೆ ಬಿಡದಿ ಕೈಗಾರಿಕಾ ಪ್ರದೇಶ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಲ್. ಚಂದ್ರಶೇಖರ್ ಮಾಲಾರ್ಪಣೆ ಮಾಡಿದರು.

ಹಸಿರು ತಳಿರುತೋರಣ ಮತ್ತು ಕನ್ನಡ ಬಾವುಟಗಳಿಂದ ಸಿಂಗರಿಸಿದ್ದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಎಲ್.ಸಿ. ರಾಜು, ಪತ್ನಿ ವಿ. ಜ್ಯೋತಿರಾಜ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಸಾಹಿತಿ ಎಂ. ಬೈರೇಗೌಡ ಇದ್ದರು.

ADVERTISEMENT

ವೀರಗಾಸೆ, ಮಂಗಳವಾದ್ಯ, ತಮಟೆ ವಾದನ, ಸೋಮನ ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ಹೆಣ್ಣು ಮಕ್ಕಳಿಂದ ಪಟ ಕುಣಿತ, ಡೊಳ್ಳು ಕುಣಿತ ಹಾಗೂ ಪೂರ್ಣಕುಂಭದೊಂದಿಗೆ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಸವೇಶ್ವರ ರಂಗಮಂದಿರದಲ್ಲಿ ‘ಕಾವ್ಯ ವಾಹಿನಿ’ ಕವಿಗೋಷ್ಠಿ ನಡೆಯಿತು. ಸಂಗೀತ ವಿದ್ವಾನ್ ಶಿವಾಜಿರಾವ್‌ ಆಶಯ ನುಡಿಗಳನ್ನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ.ಎಚ್. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಂ. ಶಿವನಂಜಯ್ಯ, ಸಮ್ಮೇಳನಾಧ್ಯಕ್ಷ ಎಲ್.ಸಿ. ರಾಜು ಇದ್ದರು.

ಕವಿಗಳಾದ ಹೊಸದೊಡ್ಡಿ ರಮೇಶ್, ಚನ್ನಮಾನಹಳ್ಳಿ ಮಲ್ಲೇಶ್, ಅಂಕನಹಳ್ಳಿ ಪಾರ್ಥ, ಎಸ್. ಸುಮಂಗಲಾ ಸಿದ್ದರಾಜು, ಸಿಪಿಲೆ ಸತೀಶ್, ಸತ್ಯಭಾಮಾ ಗೋಪಾಲ್, ಕೆ. ಶಿವಹೊಂಬಯ್ಯ, ವಿ. ಆನಂದ್, ಎಚ್.ವಿ. ಮೂರ್ತಿ, ಅರುಣ್‌ ಕವಣಾಪುರ, ಆನಂದ್, ವೀರಣ್ಣ ಪಟ್ಟಣಶೆಟ್ಟಿ ಕವಿತೆಗಳನ್ನು ವಾಚಿಸಿದರು. ಉಪನ್ಯಾಸಕಿ ಇಂದಿರಮ್ಮ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್.ಕೆ. ಶೈಲಾ ಶ್ರೀನಿವಾಸ್ ನಿರೂಪಿಸಿದರು.

ವಿಚಾರ ವಾಹಿನಿ: ವಿಚಾರ ವಾಹಿನಿ ಕಾರ್ಯಕ್ರಮದಲ್ಲಿ ಎಲ್‌.ಸಿ. ರಾಜು ಅವರ ಸಾಹಿತ್ಯಾವಲೋಕನ ಕುರಿತು ಉಪನ್ಯಾಸಕ ಜಿ. ಶಿವಣ್ಣ ಕೊತ್ತೀಪುರ, ಭವಿಷ್ಯದ ರಾಮನಗರ ಕುರಿತು ಹಿರಿಯ ಪತ್ರಕರ್ತ ಎ.ಸಿ.ರಾಜಶೇಖರ್‌ ಮಾತನಾಡಿದರು. ಚಿಂತಕ ಸು.ಚಿ. ಗಂಗಾಧರಯ್ಯ, ಸಮ್ಮೇಳನಾಧ್ಯಕ್ಷ ಎಲ್.ಸಿ.ರಾಜು, ಹಿರಿಯ ಮುಖಂಡ ಎಚ್.ಸಿ. ರಾಜಣ್ಣ ಇದ್ದರು. ಉಪನ್ಯಾಸಕ ಅಕ್ಕೂರು ಬಸವರಾಜ್‌ ಸ್ವಾಗತಿಸಿದರು. ವಿಜಯ್‌ರಾಂಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.