ADVERTISEMENT

‘ಪೋಷಕರು ಮಕ್ಕಳನ್ನೇ ಆಸ್ತಿಯಾಗಿ ರೂಪಿಸಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 6:53 IST
Last Updated 9 ಫೆಬ್ರುವರಿ 2018, 6:53 IST

ಕನಕಪುರ: ಪೋಷಕರು ಮಕ್ಕಳಿಗೆ ಆಸ್ತಿ ಸಂಪತ್ತು ಮಾಡಿಕೊಡುವ ಬದಲಾಗಿ ಉನ್ನತ ವಿದ್ಯಾಭ್ಯಾಸ ಕೊಡಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು
ಆದಿಚುಂಚನಗಿರಿ ಕನಕಪುರ ಶಾಖಾ ಮಠದ ವಿದ್ಯಾಧರನಾಥ ಸ್ವಾಮಿ ಕರೆ ನೀಡಿದರು.

ನಗರದ ಛತ್ರದ ಬಳಿಯಿರುವ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಾಲಗಂಗಾಧರನಾಥಸ್ವಾಮಿ 5ನೇ ವರ್ಷದ ಸಂಸ್ಮರಣೋತ್ಸವ, ಬಿ.ಜಿ.ಎಸ್‌.ಉತ್ಸವ–2018 ಹಾಗೂ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾವಂತರಾದ ಮಕ್ಕಳು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಮ್ಮ ಆಶೋತ್ತರ ಬದಿಗೊತ್ತಿ ದುಡಿದ ತಂದೆ ತಾಯಿಯರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ದೇಶದ ಭವಿಷ್ಯ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ADVERTISEMENT

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ದೇಶ ನಿರ್ಮಾಣ ಆಗಬೇಕಾದರೆ ಉತ್ತಮ ಪ್ರಜೆಗಳನ್ನು ನಾವು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ವೇದಿಕೆ ಕಲ್ಪಿಸಬೇಕೆಂದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವೇಷಭೂಷಣ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳ ಪೋಷಕರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಅಲ್ಲಿಯೇ ಬಹುಮಾನ ನೀಡಿ ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಉನ್ನತ ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಯಿತು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಚಿಕ್ಕಬಳ್ಳಾಪುರ ವಿಭಾಗದ ಮುಖ್ಯ ಆಡಳಿತಾಧಿಕಾರಿ ಡಾ. ಎನ್‌.ಎಸ್‌. ಶಿವರಾಮರೆಡ್ಡಿ, ಕನಕಪುರ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಮಲ್ಲೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಸ್‌. ಯತಿಕುಮಾರ್‌, ಶಿಕ್ಷಣ ಸಂಸ್ಥೆಯ ಎಲ್ಲ ಬೋಧಕ– ಬೋಧಕೇತರು, ವಿದ್ಯಾರ್ಥಿಗಳು, ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.