ರಾಮನಗರ: ಇಲ್ಲಿಯ ಜಾನಪದ ಕಲೆಗಳ ಸಾಂಸ್ಕೃತಿಕ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ ಜಾನಪದ ಲೋಕಕ್ಕೆ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ₹2 ಕೋಟಿ ವಿಶೇಷ ಅನುದಾನದಲ್ಲಿ ಕೇವಲ ₹1 ಕೋಟಿ ಮಾತ್ರ ಬಿಡುಗಡೆಯಾಗಿದೆ.
ಇದೀಗ ಮತ್ತೊಂದು ಬಜೆಟ್ ಸಮೀಪಿಸಿದರೂ ಬಾಕಿ ₹1 ಕೋಟಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಮತ್ತೊಂದು ಬಜೆಟ್ ಮಂಡನೆಗೂ ಮುಂಚೆ ಹಣ ಬಿಡುಗಡೆಯಾಗದಿದ್ದರೆ ಎಲ್ಲಿ ಅನುದಾನ ಕೈ ತಪ್ಪುವುದೊ ಎಂಬ ಆತಂಕ ಕರ್ನಾಟಕ ಜಾನಪದ ಪರಿಷತ್ತನ್ನು ಕಾಡುತ್ತಿದೆ.
ಬಾಕಿ ಅನುದಾನಕ್ಕಾಗಿ ಜಾನಪದ ಪರಿಷತ್ತಿನ ಅಧ್ಯಕ್ಷ ಹಾಗೂ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸುವ ಜೊತೆಗೆ ಕಚೇರಿಗೆ ಅಲೆದು ಹೈರಾಣಾಗಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತಿನ ಭಾಗವಾಗಿರುವ ಜಾನಪದ ಲೋಕ ಆರ್ಥಿಕ ಬಲವಿಲ್ಲದೆ ಸಂಕಷ್ಟದಲ್ಲಿದೆ. ಇದನ್ನು ಮನಗಂಡಿದ್ದ ಸರ್ಕಾರ ಕಳೆದ ವರ್ಷ ವಿಶೇಷ ಅನುದಾನದ ಕೊಡುಗೆ ನೀಡಿತ್ತು. ಅಮೂರ್ತ ಸಾಂಸ್ಕತಿಕ ಪರಂಪರೆ ಸಂರಕ್ಷಣೆಯ ಉದ್ದೇಶಕ್ಕಾಗಿ ಪರಿಷತ್ತು ಯುನೆಸ್ಕೊ ಮಾನ್ಯತೆ ಪಡೆದಿದೆ. ಆದರೆ, ವರ್ಷವಾಗುತ್ತಾ ಬಂದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಣ ಬಂದಿಲ್ಲ. ಇದರಿಂದ ಜಾನಪದ ಲೋಕದ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.
‘ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ವಿಶೇಷ ಅನುದಾನದ ₹2 ಕೋಟಿ ಪೈಕಿ ಬಾಕಿ ₹1 ಕೋಟಿ ಬಿಡುಗಡೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡುತ್ತಲೇ ಇದ್ದೇವೆ. ಈಗಾಗಲೇ ಬಿಡುಗಡೆಯಾದ ₹1 ಕೋಟಿ ಮೊತ್ತದ ಖರ್ಚುವೆಚ್ಚದ ಲೆಕ್ಕದ ಮಾಹಿತಿ ಕೊಡುವಂತೆ ಇಲಾಖೆ ಕೇಳಿತ್ತು. ಅದನ್ನು ಸಹ ಕೊಟ್ಟಿದ್ದೇವೆ. ಆದರೂ ಹಣ ಬಂದಿಲ್ಲ’ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಾನಪದ ಕಲೆ ಹಾಗೂ ಕಲಾವಿದರನ್ನು 31 ವರ್ಷಗಳಿಂದ ಪೋಷಿಸಿಕೊಂಡು ಬರುತ್ತಿರುವ ಜಾನಪದ ಲೋಕವು ಶಾಶ್ವತ ಅನುದಾನಿತ ಸಂಸ್ಥೆಯಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟದಲ್ಲೇ ಮುನ್ನಡೆಯುತ್ತಿದೆ. ಸರ್ಕಾರದಿಂದ ಪ್ರತಿ ವರ್ಷ ₹1 ಕೋಟಿ ಮಾತ್ರ ಬಿಡುಗಡೆಯಾಗುತ್ತದೆ. ಬಹುತೇಕ ಆ ಮೊತ್ತವು ಇಲ್ಲಿ ಕೆಲಸ ಮಾಡುವ 30 ಸಿಬ್ಬಂದಿಯ ಸಂಬಳಕ್ಕೆ ವ್ಯಯವಾಗುತ್ತದೆ’ ಎಂದು ಹೇಳಿದರು.
‘ಸಿಬ್ಬಂದಿ ಸಂಬಳಕ್ಕೆ ಹಿಂದೆ ಇಲಾಖೆ ನೀಡುತ್ತಿದ್ದ ಪ್ರತ್ಯೇಕ ಅನುದಾನವನ್ನು ಮೂರು ವರ್ಷದಿಂದ ಸ್ಥಗಿತಗೊಳಿಸಲಾಗಿದೆ. ಸಿಬ್ಬಂದಿಗೆ ಸಂಬಳ ಹೆಚ್ಚಳ ಮಾಡಲಾಗದ ಸ್ಥಿತಿಯಲಿದ್ದು, ಕಡಿಮೆ ಸಂಬಳಕ್ಕೆ ಅವರು ದುಡಿಯುತ್ತಿದ್ದಾರೆ. ಪ್ರವೇಶ ಶುಲ್ಕ ಮತ್ತು ಹೋಟೆಲ್ ಬಾಡಿಗೆ ಮೊತ್ತದಲ್ಲೇ ಲೋಕೋತ್ಸವ, ಕಲಾವಿದರ ಸಂಭಾವನೆ ಸೇರಿದಂತೆ ಲೋಕದ ಚಟುವಟಿಕೆಗಳು ಹಾಗೂ ನಿರ್ವಹಣೆಯನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ’ ಎಂದರು.
ಹುದ್ದೆ ಭರ್ತಿಗೂ ಗ್ರಹಣ: ‘ಮುಂಚೆ ಸರ್ಕಾರದಿಂದ ಲೋಕಕ್ಕೆ 11 ಹುದ್ದೆ ಮಂಜೂರಾಗಿದ್ದವು. ಆ ಪೈಕಿ 9 ಮಂದಿ ಈಗಾಗಲೇ ನಿವೃತ್ತರಾಗಿದ್ದು, ಸದ್ಯ ಇಬ್ಬರಷ್ಟೇ ಉಳಿದಿದ್ದಾರೆ. ಆ ಹುದ್ದೆಗಳ ಮರು ಭರ್ತಿಗೂ ಸರ್ಕಾರ ಮುಂದಾಗುತ್ತಿಲ್ಲ. ಇದರಿಂದಾಗಿ, ಲೋಕದ ಕಾರ್ಯಚಟುವಟಿಕೆಗಳಿಗೂ ಮಾನವ ಸಂಪನ್ಮೂಲದ ಕೊರತೆ ಎದುರಾಗಿದೆ’ ಎಂದು ಬೋರಲಿಂಗಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಜಾನಪದ ಲೋಕಕ್ಕೆ ಬರಬೇಕಾದ ಬಾಕಿ ₹1 ಕೋಟಿ ವಿಶೇಷ ಅನುದಾನದ ಜೊತೆಗೆ ಇಲ್ಲಿನ ಕಾರ್ಯಚಟುವಟಿಕೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಈ ಸಲದ ಬಜೆಟ್‌ನಲ್ಲಿ ₹5 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆಪ್ರೊ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.