ADVERTISEMENT

ಬಿಡದಿ | ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣೆ: ಪುತ್ಥಳಿಗೆ ಗಣ್ಯರ ಪುಷ್ಪನಮನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:50 IST
Last Updated 19 ಜನವರಿ 2026, 4:50 IST
<div class="paragraphs"><p>ಬಿಡದಿಯ ಬಿಜಿಎಸ್ ವೃತ್ತದಲ್ಲಿ ಬಿಜಿಎಸ್ ಸೇವಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ 13ನೇ ವರ್ಷದ ಸಂಸ್ಮರಣಾ ಮಹೋತ್ಸವ ಮತ್ತು 81ನೇ ಜಯಂತ್ಯುತ್ಸವದಲ್ಲಿ ಸಮಿತಿ ಪದಾಧಿಕಾರಿಗಳು ವೃತ್ತದಲ್ಲಿರುವ ಸ್ವಾಮೀಜಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.&nbsp;</p></div>

ಬಿಡದಿಯ ಬಿಜಿಎಸ್ ವೃತ್ತದಲ್ಲಿ ಬಿಜಿಎಸ್ ಸೇವಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ 13ನೇ ವರ್ಷದ ಸಂಸ್ಮರಣಾ ಮಹೋತ್ಸವ ಮತ್ತು 81ನೇ ಜಯಂತ್ಯುತ್ಸವದಲ್ಲಿ ಸಮಿತಿ ಪದಾಧಿಕಾರಿಗಳು ವೃತ್ತದಲ್ಲಿರುವ ಸ್ವಾಮೀಜಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. 

   

ಬಿಡದಿ/ರಾಮನಗರ: ಇಲ್ಲಿನ ಬಿಜಿಎಸ್ ಸೇವಾ ಸಮಿತಿ ವತಿಯಿಂದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ 13ನೇ ವರ್ಷದ ಸಂಸ್ಮರಣಾ ಮಹೋತ್ಸವ ಮತ್ತು 81ನೇ ಜಯಂತ್ಯುತ್ಸವ ಭಾನುವಾರ ಜರುಗಿತು.

ಪಟ್ಟಣದಲ್ಲಿರುವ ಸ್ವಾಮೀಜಿ ಅವರ ಪುತ್ಥಳಿ ಇರುವ ಜಾಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಸ್ಥಳದಲ್ಲಿ ಜಮಾಯಿಸಿದ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಸಿ. ಉಮೇಶ್, ‘ಬಿಡದಿಯ ಬಾನಂದೂರಿನವರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಈ ನಾಡು ಕಂಡ ಧಾರ್ಮಿಕ ಮುತ್ಸದ್ದಿ. ಜಾತಿ–ಧರ್ಮದ ಬೇಧವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಅವರು, ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ’ ಎಂದರು.

‘ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾ ಸಮಾಜ ಸುಧಾರಣೆಗೂ ತಮ್ಮದೇ ಆದ ಕೊಡುಗೆ ನೀಡಿರುವ ಸ್ವಾಮೀಜಿ ಅವರು, ತಮ್ಮ ಅವಧಿಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕೀರ್ತಿಯನ್ನು ರಾಜ್ಯವಷ್ಟೇ ಅಲ್ಲದೆ, ದೇಶ–ವಿದೇಶದಲ್ಲೂ ಪಸರಿಸಿದರು. ಅವರ ಜೀವನಾದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಚಿಕ್ಕಣ್ಣಯ್ಯ ಮಾತನಾಡಿ, ‘ಸ್ವಾಮೀಜಿ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಎಲ್ಲಾ ವರ್ಗಗಳ ಜನರಿಗೂ ಮಿಡಿಯುವ ಸ್ವಾಮೀಜಿಯಾಗಿದ್ದರು. ಅಕ್ಷರ ಮತ್ತು ಅನ್ನದಾಸೋಹದ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದರು’ ಎಂದು ನೆನೆದರು.

ಮುಖಂಡ ಚಂದ್ರಣ್ಣ, ‘ನಮ್ಮ ಮಣ್ಣಿನಲ್ಲಿ ಹುಟ್ಟಿದ ಸ್ವಾಮೀಜಿ ಅವರು ಇಡೀ ನಾಡೇ ತಿರುಗಿ ನೋಡುವಂತಹ ಕೆಲಸಗಳನ್ನು ಮಾಡಿದರು. ಸಮಾಜಮುಖಿ ಕೆಲಸಗಳ ಮೂಲಕ ಸಮಾಜದ ಅಭಿವೃದ್ದಿಗೆ ದುಡಿದರು. ಅಂತಹ ಮಹನೀಯರನ್ನು ಸಮಾಜ ನೆನೆಯಬೇಕು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು’ ಎಂದರು.

ಬಿಜಿಎಸ್ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಾಜಶೇಖರ್, ಪುರಸಭೆ ಸದಸ್ಯ ಎಂ.ಎನ್. ಹರಿಪ್ರಸಾದ್, ಮುಖಂಡರಾದ ರಾಜಶೇಖರ್, ಶಿವಕುಮಾರ್, ಸುರೇಶ್ ಬಾಬು, ಭಾನುಪ್ರಕಾಶ್, ಹೊಂಬಯ್ಯ ಹಾಗೂ ಇತರರು ಇದ್ದರು.

ಹಣ್ಣು ವಿತರಣೆ: ರಾಮನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿರುವ ಬಿಜಿಎಸ್ ಅಂಧರ ಶಾಲೆಯಲ್ಲಿ ಬಾಲಗಂಗಾಧರ ಸ್ವಾಮೀಜಿ ಅಭಿಮಾನಿ ಬಳಗದ ವತಿಯಿಂದ ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಜರುಗಿತು.

ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಬಳಗದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಬಳಗದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.

ಬಳಗದ ಬಿ.ಟಿ. ದಿನೇಶ್ ಬಿಳಗುಂಬ, ಗಿರೀಶ್, ಚೇತನ್ ಗೌಡ, ದೇವರಾಜು ಕ್ಯಾಸಾಪುರ, ಸಂತೋಷ್ ಆರ್., ಶಿವರಾಂ, ಲೋಕೇಶ್, ಪ್ರಕಾಶ್, ಮೋಹನ್, ಶಾಲೆಯ ಶಿಕ್ಷಕರು ಇದ್ದರು.

ರಾಮನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿರುವ ಬಿಜಿಎಸ್ ಅಂಧರ ಶಾಲೆಯಲ್ಲಿ ಬಾಲಗಂಗಾಧರ ಸ್ವಾಮೀಜಿ ಅಭಿಮಾನಿ ಬಳಗದ ವತಿಯಿಂದ ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವದಲ್ಲಿ ಅನ್ನದಾನೇಶ್ವರನಾಥ ಸ್ವಾಮೀಜಿ ಹಾಗೂ ಬಳಗದ ಪದಾಧಿಕಾರಿಗಳು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಬಾಲಗಂಗಾಧರನಾಥ ಶ್ರೀಗಳು ಸಮಾಜದ ಮಾರ್ಗದರ್ಶಕರಾಗಿ ಶಿಕ್ಷಣ ಆರೋಗ್ಯ ಹಾಗೂ ಪರಿಸರ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನನ್ಯ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ
– ಅನ್ನದಾನೇಶ್ವರನಾಥ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.