ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಹೋಬಳಿಯ 2000 ಎಕರೆಗೂ ಹೆಚ್ಚು ಜಾಗದಲ್ಲಿ ದೇಶದ ಮೊದಲ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧರಿತ ವಿಶ್ವದರ್ಜೆಯ ಎ.ಐ ನಗರ (ಎ.ಐ ಸಿಟಿ) ತಲೆ ಎತ್ತಲಿದೆ.
‘ಕೆಲಸ–ವಾಸ–ಉಲ್ಲಾಸ’ ಪರಿಕಲ್ಪನೆ ಅಡಿ ಉಪನಗರ ಯೋಜನಾ ಪ್ರದೇಶದ ನಿರ್ಮಾಣಕ್ಕೆ ಒಟ್ಟು 9 ಗ್ರಾಮಗಳ ವ್ಯಾಪ್ತಿಯ 8,493 ಎಕರೆ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಆ ಪೈಕಿ ಎರಡು ಸಾವಿರ ಎಕರೆಯಲ್ಲಿ ಎ.ಐ ಸಿಟಿ ನಿರ್ಮಾಣವಾಗಲಿದೆ.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ಅಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ) ಈ ನಗರ ನಿರ್ಮಿಸುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಜಿಬಿಐಟಿ ಲಾಂಛನದ ಜೊತೆಗೆ ಎ.ಐ ನಗರದ ಪರಿಕಲ್ಪನೆಯ ವಿಡಿಯೊ ಕೂಡ ಬಿಡುಗಡೆ ಮಾಡಿದ್ದಾರೆ.
ಸಿಂಗಪುರ, ಬೀಜಿಂಗ್, ದುಬೈ, ಸ್ಯಾನ್ ಫ್ರಾನ್ಸಿಸ್ಕೊ ಸೇರಿ ಕೆಲವೆಡೆ ಅತ್ಯಾಧುನಿಕ ಎ.ಐ ತಂತ್ರಜ್ಞಾನ ಆಧರಿತ ನಗರಗಳು ನಿರ್ಮಾಣವಾಗಿವೆ. ಎ.ಐ ಆಧರಿತ ಆರ್ಥಿಕತೆ, ಆಡಳಿತ ಹಾಗೂ ಜೀವನಶೈಲಿ ಅಳವಡಿಸಿಕೊಂಡಿವೆ. ಇದೀಗ, ಬಿಡದಿಯಲ್ಲೂ ಅಂತಹದ್ದೇ ಒಂದು ನಗರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಕೇಂದ್ರ ವಾಣಿಜ್ಯ ಜಿಲ್ಲೆ:
‘ಉದ್ದೇಶಿತ ಎ.ಐ ನಗರಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಜಾಗತಿಕ ಕಂಪನಿಗಳು ಎ.ಐ ಆಧರಿತ ಉದ್ಯಮದ ಮೇಲೆ ಹೂಡಿಕೆ ಮಾಡಲಿವೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ನಗರದಲ್ಲಿ ಎ.ಐ ತಂತ್ರಜ್ಞಾನ ಆಧರಿತ ಮೂಲಸೌಕರ್ಯ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳನ್ನೂ ಡಿಜಿಟಲ್ ತಂತ್ರಜ್ಞಾನದೊಂದಿಗೆ ಜೋಡಿಸಲಾಗುವುದು. ಮಾನವ ಸಂಪನ್ಮೂಲದ ಬದಲು ಎ.ಐ ಆಧರಿತ ನಿಯಂತ್ರಣ ಮತ್ತು ನಿರ್ವಹಣೆಗೆ ಆದ್ಯತೆ ದೊರೆಯಲಿದೆ. ವಿಶ್ವದ ಕೆಲವೆಡೆ ಈಗಾಗಲೇ ಇಂತಹ ನಗರಗಳಿವೆ. ದೇಶದಲ್ಲಿ ಕರ್ನಾಟಕ ಮೊದಲಿಗೆ ಅಂತಹ ನಗರಕ್ಕೆ ಮುನ್ನುಡಿ ಬರೆಯುತ್ತಿದೆ’ ಎಂದು ಹೇಳಿದರು.
ಹೀಗರಲಿದೆ ಹೊಸ ಕನಸಿನ ನಗರ
– ಎ.ಐ ಸಂಬಂಧಿತ ಸೇವಾ ಕ್ಷೇತ್ರದಲ್ಲಿ ಸಾವಿರಾರು ಹೊಸ ಉದ್ಯೋಗ ಸೃಷ್ಟಿ ಗುರಿ
– ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ಯೋಗ ನೀತಿ
– ಪೂರಕವಾಗಿ ಸ್ಥಳೀಯರನ್ನು ಅಣಿಗೊಳಿಸಲು ಕೌಶಲ ಕೇಂದ್ರಗಳ ಆರಂಭ
– ಮುಖ್ಯರಸ್ತೆಗಳಿಗೆ ಸಂಪರ್ಕಕ್ಕಾಗಿ 300 ಮೀ. ಅಗಲದ ಬಿಸಿನೆಸ್ ಕಾರಿಡಾರ್
ಶೂನ್ಯ ಸಂಚಾರ ದಟ್ಟಣೆ
ಉಪ ನಗರವನ್ನು ಶೂನ್ಯ ಸಂಚಾರ ದಟ್ಟಣೆ ಪರಿಕಲ್ಪನೆ ಅಡಿ ನಿರ್ಮಿಸಲಾಗುತ್ತಿದೆ. ಎಲ್ಲಾ ದಿಕ್ಕಿನಿಂದ ಸಂಪರ್ಕಿಸಲು ಕನಿಷ್ಠ 70 ಮೀಟರ್ ಅಗಲದ ರಸ್ತೆ ನಿರ್ಮಿಸಲಾಗುವುದು. ಉಪನಗರ ವರ್ತುಲ ರಸ್ತೆ ಯೋಜನೆಯ (ಎಸ್‌ಟಿಆರ್‌ಆರ್) 9 ಕಿ.ಮೀ. ನೈಸ್ ರಸ್ತೆಯಿಂದ 11 ಕಿ.ಮೀ. ಬೆಂಗಳೂರು–ಮೈಸೂರು ಹೆದ್ದಾರಿಯಿಂದ 5 ಕಿ.ಮೀ. ಬೆಂಗಳೂರು–ದಿಂಡಿಗಲ್ ಹೆದ್ದಾರಿಯಿಂದ 2.2 ಕಿ.ಮೀ. ಅಂತರದಲ್ಲಿ ಈ ನಗರ ತಲೆ ಎತ್ತಲಿದೆ. ಈ ಯೋಜನೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಒಟ್ಟು ಉದ್ದವೇ 30 ಕಿ.ಮೀಗೂ ಹೆಚ್ಚು ಇರಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ನಟರಾಜ್ ತಿಳಿಸಿದರು.
ಮೂರ‍್ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣ ಗುರಿ
ಯೋಜನೆಗೆ ಬೇಕಾದ ಭೂಮಿ ಸ್ವಾಧೀನಕ್ಕೆ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಗುರುವಾರದಿಂದ ಆರಂಭವಾಗಿದೆ. ಸ್ವಾಧೀನಪಡಿಸಿಕೊಳ್ಳಲಾಗುವ ಭೂಮಿಗಳಿಗೆ ಜೆಎಂಸಿ ತಂಡ ಖುದ್ದಾಗಿ ಭೇಟಿ ನೀಡಿ ಅಳತೆ ಮೌಲ್ಯ ಪ್ರಮಾಣೀಕರಣ ಮಾಡಲಿದೆ. ಈ ಎಲ್ಲ ಪ್ರಕ್ರಿಯೆ ಮುಗಿದು ಅಂತಿಮ ವರದಿ ನೀಡಲು ಮೂರು ತಿಂಗಳ ಬೇಕಾಗುತ್ತದೆ. ಆ ನಂತರ ಭೂಸ್ವಾಧೀನ ಕಾರ್ಯ ನಡೆಯಲಿದೆ. ಎಲ್ಲ ಪ್ರಕ್ರಿಯೆ ಮುಗಿದು ಉಪನಗರ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ಮೂರು ವರ್ಷ ಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.