ADVERTISEMENT

ರಾಮನಗರ: ಅನುದಾನ ಬಳಕೆಗೆ ಅನುಮೋದನೆ

ದೊಡ್ಡಮುದುವಾಡಿ ಗ್ರಾ.ಪಂ. ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 4:58 IST
Last Updated 29 ಜುಲೈ 2021, 4:58 IST
ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಂ.ಎ. ಲೋಕೇಶ್‌ 15ನೇ ಹಣಕಾಸು ಬಳಕೆ ಬಗ್ಗೆ ಮಾಹಿತಿ ನೀಡಿದರು
ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಂ.ಎ. ಲೋಕೇಶ್‌ 15ನೇ ಹಣಕಾಸು ಬಳಕೆ ಬಗ್ಗೆ ಮಾಹಿತಿ ನೀಡಿದರು   

ಕನಕಪುರ: ಗ್ರಾಮ ಪಂಚಾಯಿತಿಗೆ 15ನೇ ಹಣಕಾಸು ಯೋಜನೆಯಡಿ ಬಿಡುಗಡೆ ಆಗಿರುವ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎ. ಲೋಕೇಶ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ 15ನೇ ಹಣಕಾಸು ಬಳಕೆ, ನರೇಗಾ ಹಾಗೂ ಜಲ ಜೀವನ ಮಿಷನ್‌ ಯೋಜನೆ ಅನುಷ್ಠಾನ ಕುರಿತು ನಡೆದ ಚರ್ಚೆಯಲ್ಲಿ ಮಾಹಿತಿ ನೀಡಿದರು.

ನಮ್ಮಲ್ಲಿರುವ ಹಣವನ್ನು ಗ್ರಾಮ ನೈರ್ಮಲ್ಯ, ಚರಂಡಿ ಸ್ವಚ್ಛಗೊಳಿಸುವುದು, ಬೀದಿದೀಪ ಖರೀದಿ ಮತ್ತು ನಿರ್ವಹಣೆ, ಸಿಬ್ಬಂದಿ ವೇತನ, ಜೆಜೆಎಂ, ಎಸ್‌.ಸಿ, ಎಸ್‌.ಟಿ ಮತ್ತು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಬಳಸಬೇಕಿದೆ. ಒಟ್ಟು ₹ 25 ಲಕ್ಷವಿದ್ದು ಪ್ರತಿ ಗ್ರಾಮಗಳಿಗೂ ಬಳಕೆ ಆಗಬೇಕಿದೆ ಎಂದು ಹೇಳಿದರು.

ADVERTISEMENT

ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ಸದಸ್ಯರು ಕೈಜೋಡಿಸಬೇಕು. ನಾಗರಿಕರು ಕೂಡ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ನಿಯಮಾನುಸಾರ ಹಣ ಬಳಕೆ ಮಾಡಲು ಮತ್ತು ಅಭಿವೃದ್ಧಿಗೆ ಬಳಸಲು ನಮ್ಮದೇನು ತಕರಾರು ಇಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಮಾಡಲು ತಮ್ಮ ಒಪ್ಪಿಗೆ ಇದೆ ಎಂದು ಸದಸ್ಯರು ಒಪ್ಪಿಗೆಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ ಮಂಗಳಾ, ಸದಸ್ಯರಾದ ಜಿ.ಎಚ್‌. ಶಿವಪ್ಪ, ಜಿ.ಸಿ. ಶಿವಲಿಂಗೇಗೌಡ, ಎಲ್‌.ಸಿ. ಲಿಂಗಯ್ಯ, ಚಿಕ್ಕರಾಜು, ಲಕ್ಷ್ಮಮ್ಮ, ಮಂಗಳಾ ವಿ.ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.