ADVERTISEMENT

‘ಅಂಗವಿಕಲರೂ ಸ್ವಾವಲಂಬಿಯಾಗಿ ಬದುಕಲಿ’

ಉಚಿತ ಕೃತಕ ಕಾಲು ಜೋಡಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 26 ಮೇ 2019, 14:03 IST
Last Updated 26 ಮೇ 2019, 14:03 IST
ಸಾಯಿಬಾಬಾ ಮಂದಿರದ ಸಭಾಂಗಣದಲ್ಲಿ ಭಾನುವಾರ ಕೃತಕ ಕಾಲು ಜೋಡಣಾ ಶಿಬಿರ ಭಾನುವಾರ ನಡೆಯಿತು
ಸಾಯಿಬಾಬಾ ಮಂದಿರದ ಸಭಾಂಗಣದಲ್ಲಿ ಭಾನುವಾರ ಕೃತಕ ಕಾಲು ಜೋಡಣಾ ಶಿಬಿರ ಭಾನುವಾರ ನಡೆಯಿತು   

ರಾಮನಗರ: ಇಲ್ಲಿನ ಶಿರಡಿ ಸಾಯಿಬಾಬಾ ಮಂದಿರದ ಸಭಾಂಗಣದಲ್ಲಿ ಅರ್ಹ ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರ ಭಾನುವಾರ ನಡೆಯಿತು.

ಸ್ಥಳದಲ್ಲೇ ಕಾಲಿನ ಅಳತೆ ಪಡೆದು, ಅಲ್ಲಿಯೇ ತಯಾರಿಸುವ ಕೆಲಸ ಮುಂದುವರೆದಿತ್ತು. ಪೋಲಿಯೊ ಸೇರಿದಂತೆ ಇತರೆ ಕಾರಣಗಳಿಂದ ಅಂಗವೈಕಲ್ಯಕ್ಕೆ ಗುರಿಯಾದವರಿಗೆ ಕ್ಯಾಲಿಪರ್ಸ್ ಗಳನ್ನು ಅಳವಡಿಸಲಾಯಿತು.

ಶಿಬಿರವನ್ನು ಉದ್ಘಾಟಿಸಿದ ಭಾರತ್ ವಿಕಾಸ ಪರಿಷತ್ ಟ್ರಸ್ಟಿ ಸಿ.ಎನ್.ಎನ್. ರಾಜು ಮಾತನಾಡಿ ‘ಹಲವು ವರ್ಷದಿಂದ ಉಚಿತವಾಗಿ ಈ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಅಂಗವಿಕಲರು ಸ್ವಾವಲಂಬಿಗಳಾಗಿ ಅವರ ಕಾಲ ಮೇಲೆ ಅವರು ನಿಲ್ಲಬೇಕು ಎನ್ನುವುದು ನಮ್ಮ ಆಶಯ. ಖಾಸಗಿಯಾಗಿ ಕೃತಕ ಕಾಲು ಅಳವಡಿಸಿಕೊಳ್ಳಬೇಕಾದರೆ ₨5–6 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಇಲ್ಲಿ ಉಚಿತವಾಗಿ ಅಳವಡಿಸಲಾಗುತ್ತಿದೆ’ ಎಂದರು.

ADVERTISEMENT

ಭಾರತ್ ವಿಕಾಸ ಪರಿಷತ್ ಅಧ್ಯಕ್ಷ ಬಿ.ಕೆ. ಕೃಷ್ಣಮೂರ್ತಿ ಮಾತನಾಡಿ ‘ಅನೇಕರು ಹುಟ್ಟಿನಿಂದ, ಬೆಳವಣಿಗೆಯಲ್ಲಿ, ಅಪಘಾತದಲ್ಲಿ ಹಾಗೂ ಇತರೆ ಕಾರಣಕ್ಕೆ ತಮ್ಮ ಕಾಲನ್ನು ಕಳೆದುಕೊಂಡು ಮೂಲೆಗುಂಪಾಗುತ್ತಾರೆ. ಸುತ್ತಮುತ್ತಲಿನ ಪರಿಸರದ ಸೌಂದರ್ಯವನ್ನು ನೋಡಲಾಗದೆ ವಂಚಿತರಾಗುತ್ತಿರುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎಚ್.ಡಿ. ಕೋಟೆ ರೋಟರಿ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ಡಾ. ಜಯಂತ್ ಮಾತನಾಡಿ ‘ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಸ್ತೆಯಲ್ಲಿ ವಾಹನಗಳ ಚಲಾವಣೆ ಮಾಡುವಾಗ ಅತ್ಯಂತ ಎಚ್ಚರಿಕೆಯಿಂದಿರಬೇಕು’ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಟಿ. ಬಿಳಿಗಿರಿ, ಉಪ ಸಭಾಪತಿ ವಿ. ಬಾಲಕೃಷ್ಣ, ಅಧ್ಯಕ್ಷ ಎಚ್.ವಿ. ಶೇಷಾದ್ರಿ ಐಯ್ಯರ್, ಕಾರ್ಯದರ್ಶಿ ಎನ್.ವಿ. ಲೋಕೇಶ್, ಆರೋಗ್ಯ ಸಮಿತಿ ಅಧ್ಯಕ್ಷ ಸುಪ್ರಿಯಾಕುಮಾರ್, ಪದಾಧಿಕಾರಿಗಳಾದ ಪಟೇಲ್ ಸಿ.ರಾಜು, ಕೆ.ಎಲ್. ಶೇಷಗಿರಿ ರಾವ್, ಸಿ.ಕೆ. ನಾಗರಾಜು, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಂದ್ರ, ಸಿದ್ದೇಗೌಡ, ಸರ್ವಸ್ವ ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ಪ್ರೇಮಾ ಇದ್ದರು.

ಮೈಸೂರಿನ ರೋಟರಿ ಕ್ಲಬ್, ಭಾರತ್ ವಿಕಾಸ ಪರಿಷತ್ ವಾಲ್ಮೀಖಿ ಶಾಖೆ, ಭಾರತ್ ವಿಕಾಸ್ ಪರಿಷದ್ ಟ್ರಸ್ಟ್, ಭಾರತೀಯ ರೆಡ್ ಕ್ರಾಸ್, ಶಿರಡಿ ಸಾಯಿಬಾಬಾ ಭಕ್ತಮಂಡಳಿ ಟ್ರಸ್ಟ್ ಹಾಗೂ ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.