
ಬಿಡದಿ ಪಟ್ಟಣದ ಸರೋಜಮ್ಮ ಚಿಕ್ಕತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಆರ್ಯ ಈಡಿಗರ ಸಂಘದ ಸಂಘದ ತೃತೀಯ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾಧ್ಯಕ್ಷ ಎಂ. ನಾಗರಾಜು ಮಾತನಾಡಿದರು.
ಬಿಡದಿ(ರಾಮನಗರ): ‘ಆರ್ಯ ಈಡಿಗರ ಸಂಘವು ಸಂಘಟನಾತ್ಮಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಸದೃಢವಾಗಬೇಕು. ಸಂಘದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕೈ ಜೋಡಿಸಿದಾಗ ಮಾತ್ರ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಎಂ. ನಾಗರಾಜು ಹೇಳಿದರು.
ಪಟ್ಟಣದ ಸರೋಜಮ್ಮ ಚಿಕ್ಕತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಘದ ತೃತೀಯ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಮುದಾಯದ ಗುರುಗಳಾದ ನಾರಾಯಣ ಗುರು ಜಯಂತಿಯು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಅಂದು ಸಮುದಾಯದ 20 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಸಂಘದ ಚಟುವಟಿಕೆಗಳ ಮುಂದುವರಿದ ಭಾಗವಾಗಿ ಮುಂದಿನ ವರ್ಷದ 10 ಜೋಡಿಗಳಿಗೆ ಉಚಿತವಾಗಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಮಾತನಾಡಿ, ‘ಮುಂಚೆ ನಮ್ಮ ಸಂಘದ ಸದಸ್ಯರಾಗಲು ಹಿಂಜರಿಯುವ ಸ್ಥಿತಿ ಇತ್ತು. ಈಗ ಸದಸ್ಯತ್ವದ ಜೊತೆಗೆ ಸಮುದಾಯದ ಸಂಘಟನಾ ಕಾರ್ಯಗಳು ಚುರುಕಾಗಿ ನಡೆಯುತ್ತಿವೆ. ನಮ್ಮ ಒಕ್ಕೂಟದಿಂದ ಸಮುದಾಯದವರು ಸೇರಿದಂತೆ ಹಿಂದುಳಿದ ವರ್ಗದವರಿಗೆ 40 ಹೊಲಿಗೆ ಯಂತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ವತಿಯಿಂದ ನಡೆಯುವ ಸಾಮೂಹಿಕ ವಿವಾಹಕ್ಕೆ ಕಲ್ಯಾಣ ಮಂಟಪವನ್ನು ಉಚಿತವಾಗಿ ನೀಡುವುದಾಗಿ ಮಾಲೀಕರಾದ ಸಂಧ್ಯಾ ಸುಧೀರ್ ಹೇಳಿದರು. ಸಂಘಕ್ಕೆ ಅಗತ್ಯ ನೆರವು ನೀಡುವುದಾಗಿ ಸಮುದಾಯದ ಭೋಜರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಜಗನ್ನಾಥ್ ಹಾಗೂ ಇತರರು ಭರವಸೆ ಕೊಟ್ಟರು.
ಸಂಘದ ಪಧಾನ ಕಾರ್ಯದರ್ಶಿ ಎಲ್. ಚಂದ್ರಶೇಖರ್ ಆಯವ್ಯಯ ಮಂಡಿಸಿದರು. ಖಜಾಂಚಿ ಸುಧೀರ್ ಗೋಪಾಲ್, ಉಪಾಧ್ಯಕ್ಷರಾದ ಕೆ.ಎನ್. ಸೂರ್ಯನಾರಾಯಣ, ಮಮತಾ ರವಿಕುಮಾರ್, ರಮೇಶ್ ಆರ್., ಜಂಟಿ ಕಾರ್ಯದರ್ಶಿಗಳಾದ ಕೆ.ವಿ. ಲಕ್ಷ್ಮೀಪತಿ, ರಾಜೀವ್ ಬಿ.ಪಿ, ಉದ್ಯಮಿ ಜಗನ್ನಾಥ್, ಮಂಚನಾಯ್ಕನಹಳ್ಳಿ ರವಿ ಹಾಗೂ ಇತರರು ಇದ್ದರು.
‘ಚುರುಕಾಗಬೇಕಿದೆ ಸದಸ್ಯತ್ವ ನೋಂದಣಿ’ ‘ಜಿಲ್ಲೆಯಲ್ಲಿ ಸಮುದಾಯದ ಜನಸಂಖ್ಯೆ ಸುಮಾರು 20 ಸಾವಿರ ಇದೆ. ಆದರೆ ಅದಕ್ಕೆ ತಕ್ಕಂತೆ ಸಂಘದಲ್ಲಿ ಸದಸ್ಯತ್ವದ ನೋಂದಣಿಯಾಗಿಲ್ಲ. ಸಮುದಾಯದ ಎಲ್ಲರೂ ಸದಸ್ಯತ್ವ ಪಡೆದಾಗ ಮಾತ್ರ ಸಂಘದ ಬಲವೂ ಹೆಚ್ಚಲಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಸದಸ್ಯತ್ವ ನೋಂದಣಿಯನ್ನು ಚುರುಕುಗೊಳಿಸಬೇಕು. ಸಮುದಾಯದಲ್ಲಿ ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ಸಂಘಕ್ಕೆ ನೆರವಾಗಬೇಕು. ಆಗ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿದೆ’ ಎಂದು ನಾಗರಾಜು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.