ರಾಮನಗರ: ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ದಲಿತ ಯುವಕರ ಮೇಲೆ ಹಲ್ಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ (ಎಐಬಿಎಸ್‌ಪಿ) ನೇತೃತ್ವದಲ್ಲಿ ಗ್ರಾಮಸ್ಥರು, ನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಚೇರಿಯ ಪ್ರವೇಶದ್ವಾರದ ಎದುರು ಕುಳಿತು ಪ್ರತಿಭಟಿಸಿದ ಗ್ರಾಮಸ್ಥರು, ‘ಬಂಧಿಸಿ, ಬಂಧಿಸಿ ಹಲ್ಲೆ ಆರೋಪಿಗಳನ್ನು ಬಂಧಿಸಿ’ ಎಂದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಆರೋಪಿಗಳನ್ನು ಬಂಧಿಸದ ಹಾರೋಹಳ್ಳಿ ಠಾಣೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ನಾಗೇಶ್, ‘ದಲಿತ ಯುವಕರ ಮೇಲೆ ಹಲ್ಲೆ ಮಾಡಿರುವ ದುರ್ಷ್ಕಮಿಗಳು ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಬೆಂಬಲಿಗರಾಗಿದ್ದಾರೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿದು ಆರೋಪಿಗಳ ಬಂಧನಕ್ಕೆ ಮೀನ–ಮೇಷ ಎಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ದೇವರಹಳ್ಳಿಯಲ್ಲಿ ಗ್ರಾಮದೇವತೆ ಹಬ್ಬ ನಡೆಯುವಾಗ ಬೈಕ್‌ನಲ್ಲಿ ಹೋಗುತ್ತಿದ್ದ ದಲಿತ ಯುವಕರಾದ ನಾಗರಾಜು ಮತ್ತು ಅಂಜನ್ ಹಾರನ್ ಮಾಡಿ ದಾರಿ ಬಿಡುವಂತೆ ಕೇಳಿದ್ದಕ್ಕೆ, ಮೇಲ್ವರ್ಗದವರು ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದಿದ್ದರು. ಘಟನೆ ನಡೆದ ಬಳಿಕ ಯುವಕರು ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ’ ಎಂದರು.
‘ಘಟನೆ ನಡೆದು ವಾರವಾಗುತ್ತಾ ಬಂದರೂ ಪೊಲೀಸರು ಇನ್ನೂ ಯಾಕೆ ಆರೋಪಿಗಳನ್ನು ಬಂಧಿಸಿಲ್ಲ ಎಂಬುದು ಸಂಶಯ ಮೂಡಿಸಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ದಲಿತರು ಭಯದಿಂದ ಬದುಕುವಂತಾಗಿದೆ. ಗ್ರಾಮದ ನೂರಾರು ಮಂದಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕಾಗಿ ಹೋಗಿ ಬರುತ್ತಾರೆ. ಘಟನೆಯಿಂದ ಅವರಿಗೆ ಆತಂಕ ಶುರುವಾಗಿದೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ಆತಂಕ ದೂರ ಮಾಡಬೇಕು’ ಎಂದು ಆಗ್ರಹಿಸಿದರು.
ಕುಸಿದ ಬಿದ್ದ ಯುವಕ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹರ್ಷ ಎಂಬ ಯುವಕ ಪ್ರತಿಭಟನೆ ನಡೆಯುತ್ತಿರುವಾಗಲೇ ಕುಸಿದು ಬಿದ್ದ. ಸ್ಥಳದಲ್ಲಿದ್ದವರು ತಕ್ಷಣ ಆತನನ್ನು ಆಟೊಟದಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಯುವಕ ಅಸ್ವಸ್ಥಗೊಂಡು ಕುಸಿದಿದ್ದ. ಚಿಕಿತ್ಸೆ ಬಳಿಕ ಸುಧಾರಿಸಿಕೊಂಡಿದ್ದಾನೆ ಎಂದು ಗ್ರಾಮದ ಮುಖಂಡರು ತಿಳಿಸಿದರು.
ಪ್ರತಿಭಟನೆಯಲ್ಲಿ ಎಐಬಿಎಸ್‌ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ, ಜಿಲ್ಲಾಧ್ಯಕ್ಷ ವೆಂಕಟಾಚಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ರಮೇಶ್, ಮುಖಂಡರಾದ ತುಂಬೇನಹಳ್ಳಿ ಭೈರವ, ಟಿ. ಹೊಸಹಳ್ಳಿ ಪ್ರದೀಪ್, ದೇವರಹಳ್ಳಿ ಸ್ವಾಮಿ, ನವೀನ್, ಬೋರಯ್ಯ ಹಾಗೂ ಇತರರು ಇದ್ದರು.
ಬಂಧನದ ಭರವಸೆ
ಪ್ರತಿಭಟನಾ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ನಿಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.