ರಾಮನಗರ: ಆಯುಧಪೂಜೆ ಮತ್ತು ವಿಜಯದಶಮಿ ಅಂಗವಾಗಿ ಮಂಗಳವಾರ ನಗರದಲ್ಲಿ ಮಾರುಕಟ್ಟೆ ಕಳೆಗಟ್ಟಿತ್ತು. ಹಬ್ಬಕ್ಕಾಗಿ ಹೂವು, ಹಣ್ಣು, ಬಾಳೆದಿಂಡು, ಕುಂಬಳಕಾಯಿ ಸೇರಿದಂತೆ ವಿವಿಧ ವಸ್ತುಗಳನ್ನು ಜನರು ಬೆಳಿಗ್ಗೆಯಿಂದ ಸಂಜೆವರೆಗೆ ಮುಗಿಬಿದ್ದು ಖರೀದಿಸಿದ ದೃಶ್ಯ ಕಂಡುಬಂತು.
ನಗರದ ಎಪಿಎಂಸಿ ಆವರಣ, ಬಿ.ಎಂ. ರಸ್ತೆ, ಹಳೆ ಬಸ್ ನಿಲ್ದಾಣ ವೃತ್ತ, ಹೂವಿನ ಮಾರುಕಟ್ಟೆ, ಮುಖ್ಯರಸ್ತೆ, ಮಾಗಡಿ ರಸ್ತೆ, ರೈಲು ನಿಲ್ದಾಣ ರಸ್ತೆ, ಎಂ.ಜಿ. ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಜನ ಜಂಗುಳಿ ಕಂಡುಬಂತು. ಕೆಲ ರಸ್ತೆ ವಾಹನಗಳು, ಕಚೇರಿ, ಅಂಗಡಿ, ಕಾರ್ಖಾನೆ, ಯಂತ್ರೋಪಕರಣಗಳು ಹಾಗೂ ಆಯುಧಗಳ ಅಲಂಕಾರಕ್ಕೆ ಅಲಂಕಾರಿಕ ವಸ್ತುಗಳು ಹಾಗೂ ಹಣ್ಣುಗಳನ್ನು ಜನ ಖರೀದಿಸಿದರು.
ಕೈಗೆಟುಕುವ ದರ: ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ಹೂವಿನ ದರದಲ್ಲಿ ಅಂತಹ ಏರಿಕೆ ಆಗಿರಲಿಲ್ಲ. ಕಚೇರಿ, ಕಟ್ಟಡ, ವಾಹನಗಳಿಗೆ ಸಿಂಗರಿಸಲು ಚೆಂಡು ಹೂ ಮತ್ತು ಸೇವಂತಿಗೆ ಹೂ ಪ್ರತಿ ಮಾರಿಗೆ ₹40ರಿಂದ ₹50 ಇತ್ತು. ಬಿಡಿ ಹೂಗಳು ₹30ಕ್ಕೆ ಮಾರಾಟವಾದವು. ಉಳಿದಂತೆ ಕನಕಾಂಬರ, ಮಲ್ಲಿಗೆ ಸೇರಿದಂತೆ ಯಾವ ಹೂವುಗಳು ಸಹ ಸಾವಿರದ ಗಡಿ ದಾಟಿರಲಿಲ್ಲ.
ಗ್ರಾಮೀಣ ಭಾಗದಿಂದ ಬಂದಿದ್ದ ರೈತರು ರಸ್ತೆ ಬದಿಗಳಲ್ಲಿ ಬೂದು ಕುಂಬಳಕಾಯಿ, ಬಾಳೆದಿಂಡು, ಮಾವಿನಸೊಪ್ಪು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಜನರು ಅವರನ್ನು ಸುತ್ತುವರಿದು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಈ ಸಲ ಕುಂಬಳಕಾಯಿ ಪ್ರತಿ ಕೆ.ಜಿ.ಗೆ ₹25ರಿಂದ ₹30ರಂತೆ ಮಾರಾಟವಾಯಿತು.
ಹಣ್ಣುಗಳ ದರವೂ ಸುಲಭವಾಗಿ ಕೈಗೆಟುಕುವಂತಿತ್ತು. ಅತ್ಯುತ್ತಮ ಗುಣಮಟ್ಟದ ಸೇಬು ₹200 ಇದ್ದರೆ ಸಾಮಾನ್ಯ ಗುಣಮಟ್ಟದ ಸೇಬು ₹150ಕ್ಕೆ ಮಾರಾಟವಾಯಿತು. ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ ₹80, ಪಚ್ಚಬಾಳೆ ₹50, ದ್ರಾಕ್ಷಿ ₹120, ಕಿತ್ತಳೆ ₹120, ಸೀಬೆ ₹140, ಮೋಸಂಬಿ ₹120, ಸಪೋಟಾ ₹160, ದಾಳಿಂಬೆ ₹200 ಹಣ್ಣುಗಳ ಮಿಶ್ರಣವು ₹150ಕ್ಕೆ ಮಾರಾಟವಾಯಿತು.
ಆಯುಧ ಪೂಜೆ ಬಳಿಕ ವಿತರಿಸಲು ಸಿಹಿ ತಿನಿಸುಗಳು, ಕಡ್ಲೆಪುರಿ ಸೇರಿದಂತೆ ಇತರ ಪದಾರ್ಥಗಳನ್ನು ಸಹ ಖರೀದಿಸಿದರು. ಬೇಕರಿ ಸೇರಿದಂತೆ ಸಿಹಿ ತಿನಿಸು ಅಂಗಡಿಗಳಲ್ಲಿ ರಾತ್ರಿವರೆಗೆ ಜನಜಂಗುಳಿ ಇತ್ತು. ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ಅಂಗಡಿಗಳಲ್ಲಿ ಮಾಲೀಕರಿಗೆ ಕೆಲಸಗಾರರಿಗೆ ಸಿಹಿ ತಿನಿಸುಗಳ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಿದರು.
ಆಯುಧ ಪೂಜೆ ಸರ್ಕಾರಿ ರಜೆ ಇರುವುದರಿಂದಾಗಿ ನಗರದ ಬಹುತೇಕ ಸರ್ಕಾರಿ ಕಚೇರಿಗಳು ಅಂಗಡಿಗಳು ಕಾರ್ಖಾನೆಗಳು ಸೇರಿದಂತೆ ಹಲವೆಡೆ ಮಂಗಳವಾರವೇ ಆಯುಧ ಪೂಜೆ ಜರುಗಿತು. ಚಾಮುಂಡೇಶ್ವರಿ ದೇವಿಯ ಚಿತ್ರದೊಂದಿಗೆ ವಾಹನಗಳು ವಿವಿಧ ಆಯುಧಗಳು ಕಚೇರಿ ಪರಿಕರಗಳನ್ನಿಟ್ಟು ಪೂಜೆ ನೆರವೇರಿಸಲಾಯಿತು. ಬಳಿಕ ಕುಂಬಳಕಾಯಿ ಒಡೆದು ಒಳಿತಿಗೆ ಪ್ರಾರ್ಥಿಸಲಾಯಿತು. ಹಬ್ಬದ ಪ್ರಯುಕ್ತ ಕಚೇರಿಗಳಲ್ಲಿ ಕಾರ್ಖಾನೆಗಳಲ್ಲಿ ಸೇರಿದಂತೆ ವಿವಿಧ ಸಿಹಿ ತಿನಿಸಿನ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.