ರಾಮನಗರ: ‘ಸರ್ಕಾರ ಅನಧಿಕೃತ ಆಸ್ತಿಗಳನ್ನು ಅಧಿಕೃತಗೊಳಿಸಲು ಶುರು ಮಾಡಿರುವ ನಮೂನೆ 3ಎ (ಬಿ-ಖಾತೆ) ಇ-ಆಸ್ತಿ ಅಭಿಯಾನ ಪಡೆಯಲು ಆಗಸ್ಟ್ 10 ಕೊನೆ ದಿನ. ಸರ್ಕಾರ ಕೊಟ್ಟಿರುವ ಈ ಅವಕಾಶವನ್ನು ಆಸ್ತಿ ಮಾಲೀಕರು ತಪ್ಪಿಸಿಕೊಳ್ಳದೆ ಪ್ರಯೋಜನ ಪಡೆಯಬೇಕು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಮಹಲ್‍ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ ಯಾವ ಸರ್ಕಾರಗಳೂ ಕೈಗೊಳ್ಳದ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಕೈಗೊಂಡಿದೆ. ಈ ಅವಕಾಶ ತಪ್ಪಿಸಿಕೊಂಡರೆ ಮುಂದೆ ಮತ್ತೆ ಇಂತಹದ್ದೊಂದು ಅವಕಾಶ ಸಿಗುವುದಿಲ್ಲ. ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಿ-ಖಾತೆಗಳನ್ನು ಎ-ಖಾತೆಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. ಮುಂದೆ ಬೇರೆಡೆಗೂ ವಿಸ್ತರಿಸುವ ಸಾಧ್ಯತೆ ಇದೆ’ ಎಂದರು.
‘ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 6 ಸಾವಿರ ಖಾತೆಗಳು ಬಿ-ಖಾತೆ ಪಡೆಯಲು ಅವಕಾಶವಿದೆ. ಆದರೆ, ಇಲ್ಲಿಯವರೆಗೆ 1,500 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಇನ್ನು 4,500 ಆಸ್ತಿ ಮಾಲೀಕರು ಬೇಗನೇ ಅಭಿಯಾನದ ಪ್ರಯೋಜನ ಪಡೆಯಬೇಕು. ರಾಜ್ಯ ಸರ್ಕಾರ ನೀಡಿರುವ ಅವಕಾಶವನ್ನು ಪಡೆಯಬೇಕು ಎಂದರು.
ಅಭಿಯಾನಕ್ಕೆ ಸರ್ವರ್ ತೊಡಕು: ‘ಕನ್ನಿಕಾ ಮಹಲ್‌ನಲ್ಲಿ ವಾರ್ಡ್ ಸಂಖ್ಯೆ 6, 7, 8 ಮತ್ತು 9 ವ್ಯಾಪ್ತಿಯಲ್ಲಿ ‘ಮನೆ ಮನೆಗೆ ಇ-ಖಾತೆ ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಇ–ಆಸ್ತಿಗಳನ್ನು ಸೃಜಿಸಲು ತೊಡಕಾಯಿತು. ರಾಜ್ಯದಾದ್ಯಂತ ಸರ್ವರ್ ಸಮಸ್ಯೆ ಎದುರಾಗಿರುವುದರಿಂದ ನಾಲ್ಕೂ ವಾರ್ಡ್‌ಗಳ ಅರ್ಜಿದಾರರಿಗೆ ನಗರಸಭೆಯಲ್ಲೇ ಇ–ಆಸ್ತಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.
‘ವಾರ್ಡ್ ಸಂಖ್ಯೆ 27ಕ್ಕೆ ಸಂಬಂಧಿಸಿದಂತೆ ಆ. 6ರಂದು ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ, ವಾರ್ಡ್ ಸಂಖ್ಯೆ 25 ಮತ್ತು 26ಕ್ಕೆ ಸಂಬಂಧಿಸಿದಂತೆ ಆ. 13ರಂದು ಮಂಜುನಾಥ ಕಲ್ಯಾಣ ಮಂಟಪದಲ್ಲಿ, ಆ. 20ರಂದು ವಾರ್ಡ್ 29 ಮತ್ತು 30ಕ್ಕೆ ಸಂಬಂಧಿಸಿದಂತೆ ಐಜೂರು ಸರ್ಕಾರಿ ಶಾಲೆಯಲ್ಲಿ ಹಾಗೂ ವಾರ್ಡ್ 31ರ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರಾದ ಪಾರ್ವತಮ್ಮ, ಸೋಮಶೇಖರ್ (ಮಣಿ), ಮಂಜುಳಾ, ಮಹಾಲಕ್ಷ್ಮಿ, ಪವಿತ್ರ, ಗಿರಿಜಮ್ಮ, ನಾಗಮ್ಮ, ಗೋವಿಂದರಾಜು, ಯೋಜನಾ ನಿರ್ದೇಶಕ ಶೇಖರ್, ನಗರಸಭೆ ಅಧಿಕಾರಿಗಳಾದ ಕಿರಣ್, ರೇಖಾ, ಆರ್. ನಾಗರಾಜು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.