ADVERTISEMENT

ನಮ್ಮೂರ ತಿಂಡಿ | ಬಾಬು ಚಾಟ್ಸ್: ರುಚಿಗೆ 40 ವರ್ಷ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 4:06 IST
Last Updated 18 ಆಗಸ್ಟ್ 2024, 4:06 IST
<div class="paragraphs"><p>ಮಾಗಡಿ ಪಟ್ಟಣದ ಪಾನಿಪುರಿ ಬಾಬು ಅಂಗಡಿಯಲ್ಲಿ ಪಾನಿಪುರಿ ಸವಿಯುತ್ತಿರುವ ಗ್ರಾಹಕರು</p></div>

ಮಾಗಡಿ ಪಟ್ಟಣದ ಪಾನಿಪುರಿ ಬಾಬು ಅಂಗಡಿಯಲ್ಲಿ ಪಾನಿಪುರಿ ಸವಿಯುತ್ತಿರುವ ಗ್ರಾಹಕರು

   

ಮಾಗಡಿ: ಚಾಟ್ಸ್‌ ಎಂದೊಡನೆ ಕಣ್ಣರಳಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದರೂ, ಅಷ್ಟೇ ಪ್ರಮಾಣದಲ್ಲಿ ಚಾಟ್ಸ್‌ ಅಂಗಡಿಗಳೂ ಹಾದಿಬೀದಿಯಲ್ಲಿ ತಲೆ ಎತ್ತುತ್ತಿವೆ. ಆದರೆ ನೀವು ಒಮ್ಮೆ ಬಾಬು ಚಾಟ್ಸ್‌ ಅಂಗಡಿಯಲ್ಲಿನ ಚಾಟ್ಸ್‌ ತಿಂದು ನೋಡಿದರೆ ಮತ್ತೆ ಮತ್ತೆ ಹುಡುಕಿಕೊಂಡು ಬರುತ್ತೀರಿ.

ಹೌದು, ಕಳೆದ 40 ವರ್ಷಗಳಿಂದಲೂ ಇದೇ ಅಂಗಡಿಯಲ್ಲಿ ದುಡಿಯುತ್ತಿರುವ ಬಾಬುನ ಕೈ ಚಾಟ್ಸ್‌ನ ಮಸಾಲೆಗಳಿಗೆ ಒಗ್ಗಿ ಹೋಗಿದೆ. ಅದೇ ಮಸಾಲೆ, ಅದೇ ಪೂರಿ, ಅದೇ ಪಾನಿ ಆದರೂ ಎಲ್ಲವನ್ನು ಎಷ್ಟು ಬೇಕೊ ಅಷ್ಟು, ಸಮಪ್ರಮಾಣದಲ್ಲಿ ಬೆರೆಸುವ ಕಲೆ ಬಾಬುಗೆ ಸಿದ್ಧಿಸಿದೆ. ಅದೇ ಕಾರಣಕ್ಕೆ ಬಾಬು ಅಂಗಡಿಯ ಚಾಟ್ಸ್ ರುಚಿ ಸವಿಯಲು ಹಲವು ಊರುಗಳಿಂದ ಜನ ಇಲ್ಲಿಗೆ ಆಗಮಿಸುವುದು ವಿಶೇಷ.

ADVERTISEMENT

ಮಾಗಡಿಯ ಡಾ.ರಾಜಕುಮಾರ್ ಮುಖ್ಯ ರಸ್ತೆಯಲ್ಲಿರುವ ಒಂದು ಸಣ್ಣ ಮನೆಯಲ್ಲಿಯೇ ಅಂಗಡಿ ನಡೆಸುವ ಪಾನಿಪುರಿ ಬಾಬುನ ಚಾಟ್ಸ್‌ ಎಂದರೆ ಮಾಗಡಿ ಮಾತ್ರವಲ್ಲ, ಸುತ್ತಮುತ್ತಲಿನ ಊರುಗಳಿಗೂ ಹೆಸರುವಾಸಿ. ದಿನಬೆಳಗಾಗುತ್ತಲೇ  ಚಾಟ್ಸ್‌ನ ಸಿದ್ಧಗೆ ತೊಡಗುವ ಬಾಬುನ ಅಂಗಡಿಯ ಮುಂದೆ ಸಂಜೆಯಾಗುತ್ತಲೇ ಜನ ಜಮಾಯಿಸುತ್ತಾರೆ. 

ನೈಸರ್ಗಿಕ ಪದಾರ್ಥಗಳ ಬಳಕೆ:

ಬೀದಿಗೊಂದು ಚಾಟ್ಸ್‌ ಅಂಗಡಿ ಸಿಗುತ್ತದೆ. ಬಾಬು ಅಂಗಡಿಯಲ್ಲೇನು ವಿಶೇಷ? ಎನ್ನುವವರಿಗೂ ಬಾಬು ಬಳಿ ಉತ್ತರವಿದೆ.  ಪಾನಿ, ಪುರಿ ಹಾಗೂ ಅದಕ್ಕೆ ಬಳಸುವ ಮಸಾಲೆ ಎಲ್ಲವನ್ನೂ ಅವರು ನೈಸರ್ಗಿಕ ಪದಾರ್ಥಗಳಿಂದಲೇ ತಯಾರಿಸುತ್ತಾರೆ. ಯಾವುದೇ ಬಗೆಯ ಫುಡ್‌ ಕೆಮಿಕಲ್‌, ಟೇಸ್ಟಿಂಗ್‌  ಪೌಡರ್ ಬಳಸುವುದಿಲ್ಲ. ಮಸಾಲೆಯನ್ನು ಸಹ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ತಯಾರಿಸಿಕೊಳ್ಳುತ್ತಾರೆ. 40 ವರ್ಷಗಳಿಂದಲೂ ತಾವೇ ತಯಾರಿಸುವ ಮಸಾಲೆಯನ್ನು ಬಳಸುತ್ತ, ಆರೋಗ್ಯಕರ ಹಾಗೂ ರುಚಿಯಾದ ಚಾಟ್ಸ್‌ಗಳಿಂದ ಗ್ರಾಹಕರ ಮನಸು ಗೆದ್ದಿದ್ದಾರೆ ಬಾಬು.

ಪಾನಿಪುರಿ ಬಾಬು ಎಂದೇ ಚಿರಪರಿಚಿತವಾಗಿರುವ ಬಾಬು ಅಂಗಡಿಯಲ್ಲಿ ಮಸಾಲಪುರಿ, ಪಾನಿಪುರಿ, ದಹಿಪುರಿ, ಸೇವ್ ಪುರಿ, ಫ್ಲೋಟಿಂಗ್ ಪಾನಿಪುರಿ, ಚಕ್ಕಲಿ ಮಸಾಲೆ, ಆಲೂ ಬಟಾಣಿ ಪುರಿ, ಆಲು ಪುರಿ, ಟಿಕ್ಕಿಪುರಿ, ಟೊಮೆಟೊ ಮಾಸಲೆ ಸೇರಿದಂತೆ ಬಗೆಬಗೆಯ ಚಾಟ್ಸ್‌ಗಳು ಸಿಗುತ್ತವೆ. ಆರಂಭದಲ್ಲಿ ₹ 3ಕ್ಕೆ ಪಾನಿಪುರಿ, ಮಸಾಲಾಪುರಿ ನೀಡುತ್ತಿದ್ದರು. ಈಗ ಪಾನಿಪುರಿ, ಮಸಾಲಾಪುರಿಗೆ ₹ 40, ಫ್ಲೋಟಿಂಗ್ ಪಾನಿಪುರಿ ₹ 50, ದಹಿಪುರಿ ₹ 55 ಆಗಿದೆ. ದಿನಸಿ ಬೆಲೆ ಏರಿಕೆಯಿಂದ ಚಾಟ್ಸ್‌ ಬೆಲೆ ಏರಿಕೆಯೂ ಮಾಡಬೇಕಾಗುತ್ತದೆ ಎನ್ನುತ್ತಾರೆ ಬಾಬು.

ರಾಜಕಾರಣಿಗಳಿಗೂ ಅಚ್ಚುಮೆಚ್ಚು:

ಮಾಗಡಿಯ ಮಾಜಿ ಸಚಿವ ಎಚ್.ಎಂ. ರೇವಣ್ಣನವರು ಮಾಗಡಿ ತೋಟದ ಮನೆಗೆ ಬಂದಾಗ ಬಾಬು ಅಂಗಡಿಯ ಪಾನಿಪುರಿ ಸವಿಯುತ್ತಾರೆ. ಕೆಲವೊಮ್ಮೆ ತೋಟದ ಮನೆಗೆ ಪಾನಿಪುರಿಯನ್ನು ಪಾರ್ಸೆಲ್ ತೆಗೆದುಕೊಂಡು ಹೋಗುವುದೂ ಇದೆ. ಶಾಸಕ ಎಚ್‌.ಎಸ್‌. ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್, ಮಾಜಿ ಸ್ಪೀಕರ್ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ರಾಜಕಾರಣಿಗಳು ಬಾಬು ಅಂಗಡಿಗೆ ಚಾಟ್ಸ್‌ ತಿನ್ನಲು ಬರುವುದುಂಟು. ‘ಕಳೆದ 40 ವರ್ಷಗಳಿಂದ ಗಣ್ಯರೆಲ್ಲ ನಮ್ಮ ಅಂಗಡಿಗೆ ಬಂದು ಚಾಸ್ಟ್‌ ಸವಿದು, ಶಹಬಾಸ್‌ಗಿರಿ ಹೊಟ್ಟು ಹೋಗಿದ್ದಾರೆ. ಬಡವರೇ ಇರಲಿ, ಶ್ರೀಮಂತರೇ ಬರಲಿ... ಎಲ್ಲರೂ ನಮ್ಮ ಪಾಲಿಗೆ ಗ್ರಾಹಕ ದೇವರೇ’ ಎನ್ನುತ್ತಾರೆ ಚಾಟ್ಸ್ ಅಂಗಡಿಯ ಬಾಬು.

40 ವರ್ಷಗಳಿಂದ ಪಾನಿ ಪುರಿ ವ್ಯಾಪಾರ ಮಾಡುತ್ತಿರುವ ಬಾಬು
ಚಾಟ್ಸ್‌ ಅಂಗಡಿ ಮಂಗಳವಾರ ಮತ್ತು ಬುಧವಾರ ಹೊರತುಪಡಿಸಿ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 10.30ರವರೆಗೆ ತೆರೆದಿರುತ್ತದೆ. ಪ್ರತಿದಿನ ಸುಮಾರು 200ಕ್ಕೂ ಅಧಿಕ ಪ್ಲೇಟುಗಳು ವ್ಯಾಪಾರವಾಗುತ್ತವೆ. ನಮ್ಮ ಕುಟುಂಬದ ಮೂರು ಜನ ಅಂಗಡಿಗಾಗಿ ದುಡಿಯುತ್ತಾರೆ. ನಲವತ್ತು ವರ್ಷಗಳಿಂದ ಈ ಚಾಟ್ಸ್‌ ಅಂಗಡಿ ನಮ್ಮನ್ನು ಪೊರೆಯುತ್ತಿದೆ.
ಬಾಬು, ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.