ಹಾರೋಹಳ್ಳಿ: ತಾಲ್ಲೂಕಿನ ಬಾಚಳ್ಳಿದೊಡ್ಡಿ ಗ್ರಾಮದಲ್ಲಿ ರಸ್ತೆ, ಚರಂಡಿ ಹದಗೆಟ್ಟಿದ್ದು, ಬೀದಿ ದೀಪ ಸೇರಿದಂತೆ ಮೂಲಸೌಕರ್ಯವಿಲ್ಲದೆ ಸೊರಗಿದೆ.
ಕಟ್ಟಕಡೆಯ ಹಳ್ಳಿಗಳಿಗೂ ಮೂಲ ಸೌಕರ್ಯ ಕಲ್ಪಿಸಬೇಕೆಂದು ಸರ್ಕಾರಗಳು ಸಲವು ಯೋಜನೆಗಳು ಅನುಷ್ಠಾನಗೊಳಿಸಿದ್ದರೂ ತಾಲ್ಲೂಕಿನ ಬಾಚಳ್ಳಿದೊಡ್ಡಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಚರಂಡಿ ವ್ಯವಸ್ಥೆಯಿಲ್ಲ: ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದರೂ ಇದುವರೆಗೂ ಚರಂಡಿ ನಿರ್ಮಾಣ ಮಾಡಿಲ್ಲ. ಇದರಿಂದ ಮನೆಗಳ ನೀರು ರಸ್ತೆಯಲ್ಲಿ ನಿಂತು ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.
ಹದಗೆಟ್ಟ ರಸ್ತೆ: ಗ್ರಾಮದಲ್ಲಿ ರಸ್ತೆ ನಿರ್ಮಿಸಿ 25 ರಿಂದ 30 ವರ್ಷಗಳಾಗಿದ್ದು, ಬರೀ ಗುಂಡಿಮಯವಾಗಿದೆ. ಹಾಗಾಗಿ ಪ್ರಯಾಣಿಕರು ಸಂಚರಿಸಲು ಕಷ್ಟ ಪಡುವಂತಾಗಿದೆ. ರಸ್ತೆಯುದ್ದಕ್ಕೂ ತಗ್ಗು– ದಿನ್ನೆಗಳಿವೆ. ಈ ರಸ್ತೆಯಲ್ಲಿ ಪ್ರಯಾಣಿಸುವವರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ರಾತ್ರಿ ವೇಳೆ ಪ್ರಯಾಣ ತೀರ ಕಷ್ಟಕರವಾಗಿದೆ.
ಉರಿಯದ ಬೀದಿ ದೀಪ: ರಾತ್ರಿ ವೇಳೆ ಓಡಾಡುವುದೇ ಸಾರ್ವಜನಿಕರಿಗೆ ದೊಡ್ಡ ಸವಾಲಾಗಿದೆ. ಬೀದಿ ದೀಪಗಳು ಸರಿಯಾಗಿ ಉರಿಯದ ಕಾರಣ ಸಾರ್ವಜನಿಕರು ಕತ್ತಲಲ್ಲಿ ಓಡಾಡುವಂತಾಗಿದೆ.
ಹಾಗಾಗಿ ಪಂಚಾಯಿತಿಯವರು ಎಚ್ಚೆತ್ತು ಗ್ರಾಮಕ್ಕೆ ಸೌಲಭ್ಯ ಒದಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.