ADVERTISEMENT

ಅ. 9ಕ್ಕೆ ಬಹುಜನರ ಸಂಕಲ್ಪ ಸಮಾವೇಶ: ರಾಜು ಎಸ್. ಮೌರ್ಯ

ರಾಜ್ಯದ ನಾಲ್ಕು ವಿಭಾಗಗಳಲ್ಲೂ ಸಮಾವೇಶ ಆಯೋಜನೆ: ಬಿಎಸ್‌ಪಿ ಜಿಲ್ಲಾಧ್ಯಕ್ಷ ರಾಜು ಮೌರ್ಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:27 IST
Last Updated 7 ಅಕ್ಟೋಬರ್ 2025, 2:27 IST
ರಾಮನಗರದ ಕಾಮತ್ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ರಾಜು ಎಸ್. ಮೌರ್ಯ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಉಪಾಧ್ಯಕ್ಷ ಗಣೇಶ್ ಹಾಗೂ ಇತರರು ಇದ್ದಾರೆ
ರಾಮನಗರದ ಕಾಮತ್ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ರಾಜು ಎಸ್. ಮೌರ್ಯ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಉಪಾಧ್ಯಕ್ಷ ಗಣೇಶ್ ಹಾಗೂ ಇತರರು ಇದ್ದಾರೆ   

ರಾಮನಗರ: ‘ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಶಿರಾಮ್‌ ಅವರ ಪರಿನಿಬ್ಬಾಣ ದಿನದ ಪ್ರಯುಕ್ತ ಪಕ್ಷದ ವತಿಯಿಂದ ಅ. 9ರಂದು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಹುಜನರ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎಸ್. ಮೌರ್ಯ ಹೇಳಿದರು.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಸೂಚನೆ ಮೇರೆಗೆ, ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ರಾಜ್ಯದ 4 ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ವಿಜಯಪುರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ನಗರದ ಕಾಮತ್ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈಗಾಗಲೇ ಉತ್ತರ ಪ್ರದೇಶದಲ್ಲಿ ಪಕ್ಷದ ನಾಯಕಿ ಮಾಯಾವತಿ ಅವರು ಸುಮಾರು ಹತ್ತು ಲಕ್ಷ ಜನರನ್ನು ಸೇರಿಸಿ ಯಶಸ್ವಿಯಾಗಿ ಸಮಾವೇಶ ಮಾಡಿದ್ದಾರೆ.  ಆ ಮೂಲಕ, ಬಹುಜನ ಸಮುದಾಯ ಮಾರಾಟಕ್ಕಿಲ್ಲ ಎಂಬ ಸಂದೇಶ ಸಾರಿರುವ ಅವರು, ಪಕ್ಷವನ್ನು ಮತ್ತೆ ಸದೃಢವಾಗಿ ಕಟ್ಟಲು ಸಂಕಲ್ಪ ಮಾಡಿದ್ದಾರೆ’ ಎಂದರು.

ADVERTISEMENT

‘ಕಾನ್ಶಿರಾಮ್ ಅವರು ದೇಶವನ್ನು ಸೈಕಲ್‌ನಲ್ಲಿ ಸುತ್ತಿ ಡಿಎಸ್‌4 ಮತ್ತು ಬಾಂಸೆಫ್ ಸಂಘಟನೆಗಳನ್ನು ಕಟ್ಟಿ ದಲಿತ ಮತ್ತು ಹಿಂದುಳಿದ ವರ್ಗಗಳ ನೌಕರರನ್ನು ಸಂಘಟಿಸಿದರು. ಬಳಿಕ ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿ, ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತರುವ ಮೂಲಕ ಬಹುಜನರು ಈ ದೇಶ ಆಳಬಹುದು ಎಂದು ತೋರಿಸಿ ಕೊಟ್ಟರು’ ಎಂದು ಹೇಳಿದರು.

‘ಪಕ್ಷವನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸಂಘಟಿಸುವ ಮೂಲಕ ಮುಂಬರುವ ಚುನಾವಣೆಗಳಿಗೆ ಅಣಿಗೊಳಿಸಲು ಪಕ್ಷದ ನಾಯಕರು ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ. ಅದರ ಭಾಗವಾಗಿ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದೇವೆ. ಆ ನಿಟ್ಟಿನಲ್ಲಿ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯನ್ನು ನಡೆಸಲಾಗಿದೆ. . ಕಾನ್ಶಿರಾಮ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪಕ್ಷವನ್ನು ಸಂಘಟನೆಗೆ ಒತ್ತು ನೀಡಲಾಗುತ್ತಿದೆ’ ಎಂದರು.

ಪಕ್ಷದ ಉಪಾಧ್ಯಕ್ಷ ಗಣೇಶ್, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಮಲ್ಲವೀರಯ್ಯ, ಹನುಮಂತಯ್ಯ, ನಂಜುಂಡಯ್ಯ ಹಾಗೂ ದಿಲೀಪ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.