ADVERTISEMENT

ಸಿದ್ದರಾಮಯ್ಯ ಬಳಿಕ ಡಿ.ಕೆ.ಶಿವಕುಮಾರ್‌ಗೇ ಅವಕಾಶ ಕೊಡಲಿ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 19:29 IST
Last Updated 11 ಜುಲೈ 2025, 19:29 IST
ಎಚ್‌.ಸಿ.ಬಾಲಕೃಷ್ಣ 
ಎಚ್‌.ಸಿ.ಬಾಲಕೃಷ್ಣ    

ಬಿಡದಿ (ರಾಮನಗರ): ‘ಸಿದ್ದರಾಮಯ್ಯ ಅವರು ಸಿ.ಎಂ ಆಗಿ ಐದು ವರ್ಷ ಇರುತ್ತಾರೊ ಅಥವಾ ಹತ್ತು ವರ್ಷ ಇರುತ್ತಾರೊ ಗೊತ್ತಿಲ್ಲ. ಅವರ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಕೊಡಬೇಕಷ್ಟೆ’ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

‘ಎಲ್ಲರಿಗೂ ಎಲ್ಲ ರೀತಿಯ ಬಲವಿರುವುದಿಲ್ಲ. ಇಲ್ಲಿ ಬಲಾಬಲದ ಪ್ರಶ್ನೆಯೇ ಬರಲ್ಲ. ಬದಲಿಗೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಅವರು ಸ್ಪಷ್ಟಪಡಿಸಿದರು..

‘ಐದು ವರ್ಷ ನಾನೇ ಸಿ.ಎಂ ಹಾಗೂ ಡಿಕೆಶಿಗೆ ಶಾಸಕರ ಬಲ ಕಡಿಮೆ ಇದೆ’ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ADVERTISEMENT

ಅವರು, ‘ಶಿವಕುಮಾರ್ ಅವರಿಗೆ ಶಾಸಕರ ಬಲ ಇದೆಯೋ ಇಲ್ಲವೋ ಅಂತ ನಾನು ಹೇಳಲ್ಲ. ಎಲ್ಲರಿಗೂ ಎಲ್ಲ ರೀತಿಯ ಬಲ ಇರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಈಗ ಹೆಚ್ಚು ಶಾಸಕರ ಬಲವಿರಬಹುದು. ನಂತರದ ಸ್ಥಾನದಲ್ಲಿ ನಾವಿದ್ದೇವೆ’ ಎಂದರು.

‘ಸ್ವಾಮೀಜಿಗಳು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಶಿವಕುಮಾರ್ ಸಿ.ಎಂ ಆಗಬೇಕೆಂಬ ಅಭಿಲಾಷೆ ಇದೆ. ಪಕ್ಷಕ್ಕಾಗಿ ಶ್ರಮಪಟ್ಟಿರುವುದರಿಂದ ಅವಕಾಶ ಸಿಗಬೇಕು ಎನ್ನುವುದು ಜನಜನಿತ. ಸಿದ್ದರಾಮಯ್ಯ ಅವರನ್ನು ಇಳಿಸಿ ನಾಳೆಯೇ ಶಿವಕುಮಾರ್ ಅವರನ್ನು ಸಿ.ಎಂ ಮಾಡಿ ಅಂತ ಕೇಳಲ್ಲ. ಏನಿದ್ದರೂ ಹೈಕಮಾಂಡ್ ತೀರ್ಮಾನಿಸಬೇಕು’ಎಂದು ತಿಳಿಸಿದರು.

‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜತೆ ರಾಜಕೀಯ ಕುರಿತು ಚರ್ಚಿಸಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವಿಷಯವನ್ನು ನಾಯಕರು ಮತ್ತು ಹೈಕಮಾಂಡ್ ನೋಡಿಕೊಳ್ಳುತ್ತಾರೆ. ನನಗೂ ಸಚಿವನಾಗುವ ಆಸೆ ಇದೆ. ಆದರೆ, ಎಲ್ಲವನ್ನೂ ನಿರ್ಧರಿಸುವುದು ಹೈಕಮಾಂಡ್’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.