ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಲಿದೆ. ಕನಕಪುರದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮಾಜಿ ಸಂಸದರೂ ಆಗಿರುವ ಡಿ.ಕೆ. ಸುರೇಶ್ ನಾಮನಿರ್ದೇಶಕ
ಸಲ್ಲಿಸಲಿದ್ದಾರೆ.
ಈ ಕುರಿತು, ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಸೇರಿದಂತೆ ಸುರೇಶ್ ಪೋಸ್ಟ್‌ಗಳ ಹರಿಬಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಬಮೂಲ್‌ನ 14 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಮಂದಿ ಜಯ ಸಾಧಿಸುವುದರೊಂದಿಗೆ, ಬಮೂಲ್ ‘ಕೈ’ ತೆಕ್ಕೆಗೆ ಜಾರಿದೆ. ಅದರಲ್ಲೂ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಿಂದ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರೊಂದಿಗೆ ಕೆಎಂಎಫ್ ಅಧ್ಯಕ್ಷ ಹುದ್ದೆ ಮೇಲೆ ಸುರೇಶ್ ಕಣ್ಣಿಟ್ಟಿದ್ದಾರೆಂಬ ಮಾತುಗಳಿಗೆ ಅಧಿಕೃತ ಮುದ್ರೆ ಬಿದ್ದಿತ್ತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರರು ಆಗಿರುವ ಸುರೇಶ್ ಅವರು, ಹಾಲಿನ ರಾಜಕೀಯ ಪ್ರವೇಶವು ಬಮೂಲ್ ಚುನಾವಣೆಯಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೆ, ಬೆಂಗಳೂರು ದಕ್ಷಿಣದ ಆರೂ ನಿರ್ದೇಶಕ ಸ್ಥಾನಗಳು ‘ಕೈ’ ಪಾಲಾಗಿದ್ದವು. ಚನ್ನಪಟ್ಟಣದಲ್ಲಿದ್ದ ತನ್ನ ಏಕೈಕ ಪ್ರಾತನಿಧ್ಯವನ್ನು ಜೆಡಿಎಸ್ ಕಳೆದುಕೊಂಡಿತ್ತು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಬಮೂಲ್‌ಗೆ ಸುರೇಶ್ ಅವರೇ ಅಧ್ಯಕ್ಷರಾಗಬೇಕು. ಇದರ ಜೊತೆಗೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಹುದ್ದೆಯನ್ನು ಸಹ ಅಲಂಕರಿಸಬೇಕು ಎಂದು ನಾವು ಆರಂಭದಿಂದಲೂ ಬಹುತೇಕ ನಿರ್ದೇಶಕರು ಒತ್ತಾಯಿಸುತ್ತಲೇ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಡಿಸಿಎಂ ನೇತೃತ್ವದಲ್ಲಿ ಸಭೆ: ಬಮೂಲ್ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಎಚ್. ಮುನಿಯಪ್ಪ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಎಚ್.ಎ. ಇಕ್ಬಾಲ್ ಹುಸೇನ್, ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ನಿರ್ದೇಶಕರು ಭಾಗವಹಿಸಿದ್ದರು.
ಎಲ್ಲರೂ ಸುರೇಶ್ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು. ಅದಕ್ಕೆ ಡಿಸಿಎಂ ಸಹ ಒಪ್ಪಿದರು ಎಂದು ಮೂಲಗಳು ತಿಳಿಸಿವೆ. ಸಭೆ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಸುರೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಪೋಸ್ಟರ್‌ಗಳು ಹರಿದಾಡತೊಡಗಿವೆ.
ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಾನು ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿಭರಿತ ಪ್ರೋತ್ಸಾಹ ಹಾಗೂ ಆಶೀರ್ವಾದ ನನ್ನ ಮೇಲಿರಲಿಡಿ.ಕೆ. ಸುರೇಶ್ ಬಮೂಲ್ ನಿರ್ದೇಶಕ (ಫೇಸ್‌ಬುಕ್ ಪೋಸ್ಟ್ ಹೇಳಿಕೆ)
ಡಿ.ಕೆ. ಸುರೇಶ್ ಅವರು ಬಮೂಲ್ ಜೊತೆಗೆ ಮುಂದೆ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ. ಆಡಳಿತ ಚತುರರಾಗಿರುವ ಅವರಿಂದ ಕೆಎಂಎಫ್‌ನಲ್ಲಿ ಮಹತ್ತರ ಬದಲಾವಣೆಗಳಾಗಲಿವೆರಾಜಕುಮಾರ್ ಬಮೂಲ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.