ADVERTISEMENT

‘ಹೈನುಗಾರಿಕೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ’

ಚನ್ನಮಾನಹಳ್ಳಿ ಡೇರಿ: ಐದು ಕುಟುಂಬಗಳಿಗೆ ವಿಮೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:15 IST
Last Updated 25 ಏಪ್ರಿಲ್ 2019, 20:15 IST
ಚನ್ನಮಾನಹಳ್ಳಿ ಗ್ರಾಮದ ಹಾಲು ಉತ್ಪಾದಕ ರೈತರಿಗೆ ಬಮೂಲ್ ವಿಮಾ ಯೋಜನೆಯ ಪರಿಹಾರ ಚೆಕ್ ಅನ್ನು ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ವಿತರಿಸಿದರು
ಚನ್ನಮಾನಹಳ್ಳಿ ಗ್ರಾಮದ ಹಾಲು ಉತ್ಪಾದಕ ರೈತರಿಗೆ ಬಮೂಲ್ ವಿಮಾ ಯೋಜನೆಯ ಪರಿಹಾರ ಚೆಕ್ ಅನ್ನು ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ವಿತರಿಸಿದರು   

ರಾಮನಗರ: ‘ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಹೈನುಗಾರಿಕೆಯ ಪಾತ್ರ ಮಹತ್ವದ್ದಾಗಿದೆ’ ಎಂದು ಕೆಎಂಎಫ್‌ ಅಧ್ಯಕ್ಷ ಪಿ. ನಾಗರಾಜು ಹೇಳಿದರು.

ತಾಲ್ಲೂಕಿನ ಚನ್ನಮಾನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಂಘದ ವ್ಯಾಪ್ತಿಯಲ್ಲಿ ಮೃತಪಟ್ಟ ಐವರು ಸದಸ್ಯರ ಕುಟುಂಬದವರಿಗೆ ಬಮೂಲ್ ವಿಮಾ ಯೋಜನೆಯಲ್ಲಿ ತಲಾ ₨2 ಲಕ್ಷ ಪರಿಹಾರದ ಚೆಕ್‌ ವಿತರಿಸಿ ಅವರು ಮಾತನಾಡಿದರು. ರೈತರಿಗಾಗಿ ಕೆಎಂಎಫ್‌ ಹಾಗೂ ಬಮೂಲ್‌ ಹಲವು ಯೋಜನೆಗಳನ್ನು ರೂಪಿಸಿವೆ.
₨400 ಕೋಟಿ ವೆಚ್ಚದಲ್ಲಿ ಕೆಂಗಲ್ ಬಳಿ ಹಾಲಿನ ಪೌಡರ್ ಘಟಕ, ಕನಕಪುರ ಬಳಿ ₨600 ಕೋಟಿ ವೆಚ್ಚದಲ್ಲಿ ಹಾಲು ಉತ್ಪನ್ನ ಘಟಕ ನಿರ್ಮಿಸಲಾಗುತ್ತಿದೆ. ಇದರಿಂದ ನಂದಿನಿ ಹಾಲಿಗೆ ಉತ್ತಮ ಮಾರುಕಟ್ಟೆ ಸಿಗಲಿದ್ದು ಸ್ಥಳೀಯ ಹೈನುಗಾರಿಕೆ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದರು.

ಹೈದರಾಬಾದ್, ಮುಂಬೈನಲ್ಲೂ ನಂದಿನಿ ಉತ್ಪನ್ನಗಳ ಮಾರುಕಟ್ಟೆಯು ವಿಸ್ತರಣೆಗೊಂಡಿದೆ. ಇದರಿಂದ ಒಕ್ಕೂಟವು ಲಾಭದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರೈತರಿಗೆ ಗುಣಮಟ್ಟದ ಪಶು ಆಹಾರ ದೊರೆಯುವಂತೆ ಮಾಡುವುದರ ಜೊತೆಗೆ ಉತ್ತಮ ಮಿಶ್ರತಳಿ ಜಾನುವಾರು ತಳಿ ಅಭಿವೃದ್ಧಿಗೆ ಕೃತಕ ಗರ್ಭಧಾರಣೆ ನಳಿಕೆಗಳನ್ನು ಒಕ್ಕೂಟ ಸರಬರಾಜು ಮಾಡುತ್ತಿದೆ ಎಂದರು.

ADVERTISEMENT

ಪ್ರತೀ ಗ್ರಾಮ ಮಟ್ಟದಲ್ಲೂ ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವಂತೆ ಮಾಡಲು ಒಕ್ಕೂಟದಿಂದ ಧನ ಸಹಾಯ ನೀಡಲಾಗುತ್ತಿದೆ. ಹಾಲು ಉತ್ಪಾದಕ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿ ಜಮೀನಿನಲ್ಲಿ ಹಾವು ಕಡಿತಕ್ಕೊಳಗಾಗಿ ಮರಣ ಹೊಂದಿದರೆ ₨2 ಲಕ್ಷ ಪರಿಹಾರ ಧನ ನೀಡಲಾಗುತ್ತಿದೆ. ಸರ್ಕಾರದ ಗಮನಕ್ಕೆ ಹಾಲು ಉತ್ಪಾದಕ ರೈತರ ಬವಣೆ ತಂದು ಪ್ರೋತ್ಸಾಹ ಧನವನ್ನು ₨6ಕ್ಕೆ ಏರಿಸಲಾಗಿದೆ ಎಂದರು.

ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಶಿವರಾಮಯ್ಯ ಮಾತನಾಡಿ ‘ಪಿ. ನಾಗರಾಜು ಅಧ್ಯಕ್ಷರಾದ ನಂತರ ಹಲವಾರು ಕಾರ್ಯಕ್ರಮಗಳನ್ನು ನೀಡಿ ರೈತರಿಗೆ ಬೆನ್ನುಲೆಬುಗಾಗಿ ನಿಂತಿದ್ದಾರೆ’ ಎಂದು ಶ್ಲಾಘಿಸಿದರು.

ಡೇರಿಯ ಮುಖ್ಯ ಕಾರ್ಯನಿರ್ವಾಹಕ ಅರ್ಕೇಶ್ ಮಾತನಾಡಿ ‘ಸಂಘದಲ್ಲಿ 250 ಸದಸ್ಯರು ಇದ್ದಾರೆ. ಇವರಲ್ಲಿ ಒಂಭತ್ತು ಜನ ಮರಣ ಹೊಂದಿದ್ದು ಐದು ಜನ ಫಲಾನುಭವಿಗಳ ಕುಟುಂಬಕ್ಕೆ ಸಹಾಯಧನ ತಲುಪಿಸಲಾಗಿದೆ’ ಎಂದರು.

ಡೇರಿ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಪುಟ್ಟಹೊನ್ನಯ್ಯ, ಉಮೇಶ್, ಶ್ರೀನಿವಾಸಮೂರ್ತಿ, ವಿಜಯೇಂದ್ರಕುಮಾರ್, ಮೂರ್ತಿ, ಸಿದ್ದರಾಜು, ಶಾಂತಮ್ಮ, ಗಿರಿಯಪ್ಪ, ಶಿವರಾಜು, ಶಿವಲಿಂಗಯ್ಯ ಫಲಾನುಭವಿಗಳಾದ ಕೆಂಪಮ್ಮ, ನಾಗರತ್ನಮ್ಮ, ಚಿನ್ನಸ್ವಾಮಿ, ಯಶವಂತಕುಮಾರ್, ಲಿಂಗೇಶ್ ಹಾಲು ಪರೀಕ್ಷಕ ಸಿ.ಪಿ. ಕುಮಾರ್, ಸಹಾಯಕರಾದ ಲಕ್ಷ್ಮಣ, ಆರ್. ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.