
ರಾಮನಗರ ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ನೂತನ ಡೇರಿ ಕಟ್ಟಡವನ್ನು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಉದ್ಘಾಟಿಸಿದರು
ರಾಮನಗರ: ‘ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ (ಬಮೂಲ್) ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಸುಮಾರು ₹45 ಕೋಟಿಯಷ್ಟು ನಷ್ಟದಲ್ಲಿತ್ತು. ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡ ಬಳಿಕ ಇದೀಗ ಮಾಸಿಕ ₹20 ಕೋಟಿ ಲಾಭದಲ್ಲಿದೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ನೂತನ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘ಹಿಂದೆ ಬಮೂಲ್ ಪ್ರತಿ ತಿಂಗಳು ₹14.5 ಕೋಟಿ ನಷ್ಟ ಅನುಭವಿಸುತ್ತಿತ್ತು. ಅದನ್ನು ಹಂತ ಹಂತವಾಗಿ ಇಳಿಸಿ, ಇದೀಗ ಲಾಭದ ಹಳಿಗೆ ತರಲಾಗಿದೆ. ಜನವರಿ ತಿಂಗಳಲ್ಲಿ ₹20 ಕೋಟಿ ಲಾಭ ಗಳಿಸಿದೆ’ ಎಂದರು.
‘ಬಮೂಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ಸಿಗಬೇಕಾದ ₹5 ಕೋಟಿ ಡಿ.ಎ ಭತ್ಯೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದರು. ವಿಷಯ ನನ್ನ ಬಳಿಗೆ ಬಂದಾಗ, ಮೊದಲು ಹೈನುಗಾರರಿಗೆ ಹೆಚ್ಚು ಲಾಭವಾಗುವಂತೆ ಶ್ರಮಿಸಿ. ರೈತರು ಇದ್ದರಷ್ಟೇ ನಮಗೆ ಕೆಲಸ. ಹಾಗಾಗಿ, ಮೊದಲು ಅವರಿಗೆ ಲಾಭದ ಕೊಡುಗೆ ಕೊಡೋಣ. ನಂತರ ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿರ್ಧಾರದಿಂದ ಹಿಂದೆ ಸರಿದರು’ ಎಂದು ತಿಳಿಸಿದರು.
‘ಹಾಲು ಮತ್ತು ರೇಷ್ಮೆ ಮಾತ್ರ ಕೃಷಿ ಕ್ಷೇತ್ರದಲ್ಲಿ ರೈತರಿಗೆ ನಿಯಮಿತವಾಗಿ ಆದಾಯ ತಂದು ಕೊಡುತ್ತಿದೆ. ಲಕ್ಷಾಂತರ ಮಂದಿ ಅವಲಂಬಿಸಿರುವ ಕ್ಷೀರ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇನೆ. ಮುಂದೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲೂ ಕೆಲಸ ಸಿಗಲ್ಲ. ದುಡಿಯುವ ಕೈಗಳಿಗೆ ಮಾತ್ರ ಆದಾಯ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.