ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ: ಫೆ. 28ರಿಂದ ಟೋಲ್ ಸಂಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 3:17 IST
Last Updated 27 ಫೆಬ್ರುವರಿ 2023, 3:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಟೋಲ್‌ ಕೇಂದ್ರಗಳು ಮಂಗಳವಾರದಿಂದ (ಫೆ.28) ಕಾರ್ಯಾರಂಭ ಮಾಡಲಿವೆ.

117 ಕಿ.ಮೀ ಉದ್ದದ ಹೆದ್ದಾರಿಯ ಬೆಂಗಳೂರು–ನಿಡಘಟ್ಟ (56 ಕಿ.ಮೀ) ವರೆಗಿನ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದ್ದು, ಈ ತಿಂಗಳಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ ಹೆದ್ದಾರಿ ಉದ್ಘಾಟಿಸಲಿದ್ದಾರೆ.

ಆರು ಪಥಗಳ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸುವವರಿಗೆ ಈ ಟೋಲ್‌ ಅನ್ವಯ ಆಗಲಿದೆ. ತಲಾ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿನ ಸಂಚಾರಕ್ಕೆ ಯಾವುದೇ ಟೋಲ್‌ ಇರುವುದಿಲ್ಲ.

ADVERTISEMENT

ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ಕನಿಷ್ಠ ₹135 ರಿಂದ ಟೋಲ್‌ ಆರಂಭವಾಗುತ್ತವೆ. ಸ್ಥಳೀಯ ವಾಹನಗಳಿಗೆ ₹70 ನಿಗದಿಪಡಿಸಲಾಗಿದೆ. ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ. ₹4,425ರಿಂದ ಆರಂಭವಾಗಿ ₹29,255 ಮೊತ್ತದವರೆಗೂ ವಿವಿಧ ರೀತಿಯ ಪಾಸ್‌ ಲಭ್ಯ ಇವೆ. ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್‌ ನಿರ್ಮಿಸಲಾಗಿದ್ದು, ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಇಲ್ಲಿ ಟೋಲ್‌ ನೀಡಬೇಕು.

ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್‌ನಲ್ಲಿ ಮೈಸೂರು ಕಡೆಯಿಂದ ಪ್ರಯಾಣಿಸುವವರು ಟೋಲ್‌ ಕಟ್ಟಿ ಬೆಂಗಳೂರಿನತ್ತ ಬರಬೇಕು. ಈ ಕೇಂದ್ರಗಳು ತಲಾ 11 ಗೇಟು ಹೊಂದಿದ್ದು, ಫಾಸ್ಟ್ಯಾಗ್‌ ಸಹಿತ ವಿವಿಧ ಸೌಲಭ್ಯ ಒಳಗೊಳ್ಳಲಿವೆ.

ಮಾರ್ಗ ಮಧ್ಯದ ನಗರಗಳ ಪಾಡೇನು?
ಬೆಂಗಳೂರು–ನಿಡಘಟ್ಟ ಮಾರ್ಗ ಮಧ್ಯದಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ ಬರುತ್ತವೆ. ಈ ನಗರಗಳಿಗೆ ಪ್ರಯಾಣಿಸುವವರು ಪೂರ್ಣ ಪ್ರಮಾಣದಲ್ಲಿ ಟೋಲ್‌ ಕಟ್ಟಬೇಕೆ ಅಥವಾ ಕಡ್ಡಾಯವಾಗಿ ಸರ್ವೀಸ್ ರಸ್ತೆಯಲ್ಲಿಯೇ ಪ್ರಯಾಣಿಸಬೇಕೆ ಎಂಬುದನ್ನು ಪ್ರಾಧಿಕಾರವು ಇನ್ನೂ ಸ್ಪಷ್ಟಪಡಿಸಿಲ್ಲ. ಹೆದ್ದಾರಿ ಮಾರ್ಗ ಮಧ್ಯದ ಪ್ರಮುಖ ನಗರಗಳಿಗೆ ನೈಸ್‌ ರಸ್ತೆ ಮಾದರಿಯಲ್ಲಿ ಪ್ರವೇಶ ಮತ್ತು ನಿರ್ಗಮನ ಟೋಲ್‌ ತೆರೆಯಲು ಪ್ರಾಧಿಕಾರ ಯೋಜಿಸಿದ್ದು, ಇದರ ಕಾಮಗಾರಿ ಇನ್ನಷ್ಟೇ ಆರಂಭ ಆಗಬೇಕಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ದುಬಾರಿ ಶುಲ್ಕ
ಸದ್ಯ 56 ಕಿ.ಮೀ. ಉದ್ದದ ಪ್ರಯಾಣಕ್ಕೆ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿದ ದರ ದುಬಾರಿ ಎನ್ನುವುದು ಪ್ರಯಾಣಿಕರ ಅಳಲು.

‘ಬೆಂಗಳೂರಿನಿಂದ ಮೈಸೂರಿಗೆ ಕಾರ್‌ಗೆ ₹150 ಟೋಲ್‌ ಇರಬಹುದು ಎಂದು ಅಂದಾಜಿಸಿದ್ದೆವು. ಈಗ ಕೇವಲ ಅರ್ಧ ದಾರಿಗೆ ಅಷ್ಟು ಪ್ರಮಾಣದ ಶುಲ್ಕ ವಿಧಿಸಲಾಗುತ್ತಿದೆ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.