ADVERTISEMENT

ರಾಮನಗರ: ಬನ್ನಿ ಮಹಾಂಕಾಳಿ ಕರಗ ಮಹೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 5:23 IST
Last Updated 16 ಜುಲೈ 2024, 5:23 IST
ಕರಗ ಮಹೋತ್ಸವದ ಅಂಗವಾಗಿ, ರಾಮನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಅಮ್ಮನವರ ದೇವಾಲಯವನ್ನು ಸಿಂಗರಿಸಲಾಗಿದೆ. ಕರಗಧಾರಕ ಆರ್.ಎನ್. ಯೋಗೇಶ್ ಹಾಗೂ ದೇವಾಲಯದ ಅರ್ಚಕ ಎಂ.ಎಸ್. ವಿನಯಕುಮಾರ್ ಇದ್ದಾರೆ
ಕರಗ ಮಹೋತ್ಸವದ ಅಂಗವಾಗಿ, ರಾಮನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಅಮ್ಮನವರ ದೇವಾಲಯವನ್ನು ಸಿಂಗರಿಸಲಾಗಿದೆ. ಕರಗಧಾರಕ ಆರ್.ಎನ್. ಯೋಗೇಶ್ ಹಾಗೂ ದೇವಾಲಯದ ಅರ್ಚಕ ಎಂ.ಎಸ್. ವಿನಯಕುಮಾರ್ ಇದ್ದಾರೆ    

ರಾಮನಗರ: ಇಲ್ಲಿನ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ ನಡೆಯಲಿದೆ. ನಗರದ ಪ್ರಮುಖ ಶಕ್ತಿ ದೇವತೆಯಾಗಿರುವ ಮಹಾಂಕಾಳಿಯನ್ನು ಸುಮಾರು ನಾಲ್ಕುನೂರು ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.

ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ದೇವಾಲಯವನ್ನು ಸಿಂಗರಿಸಲಾಗಿದೆ. ಮಂಡಿಪೇಟೆ ಸೇರಿದಂತೆ ಸುತ್ತಮುತ್ತಲಿನ ಬೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ಹಿನ್ನೆಲೆ: ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಎಂಬುವರು ಬಂಡಿಯಲ್ಲಿ ಕೊಲ್ಲಾಪುರಕ್ಕೆ ಹೋಗಿದ್ದಾಗ, ರಾತ್ರಿ ಕನಸಲ್ಲಿ ದೇವಿ ಕಾಣಿಸಿಕೊಂಡು ತನಗೊಂಡು ನೆಲೆ ಸ್ಥಾಪಿಸುವಂತೆ ಸೂಚಿಸಿದಳು. ಎಲ್ಲಿ ಎಂದು ಕೇಳಿದಾಗ ‘ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿ ನಿರ್ಮಿಸುವ’ ಎಂದು ಸೂಚಿಸಿದಳು.

ADVERTISEMENT

ಕೊಲ್ಲಾಪುರದಿಂದ ಹಿಂದಿರುಗಿದ ಬಾಲಾಜಿ ಅವರ ಬಂಡಿಯಯನ್ನು ಹಿಂಬಾಲಿಸಿದ ದೇವಿಯ ಗೆಜ್ಜೆಯ ನಾದ ಅಂದಿನ ಕ್ಲೋಸ್‌ಪೇಟೆಯ (ಇಂದಿನ ರಾಮನಗರ) ಬನ್ನಿ ಮರದ ಕೆಳಗೆ ನಿಂತಿತು. ಅಲ್ಲಿಯೇ ತನ್ನನ್ನು ಪ್ರತಿಷ್ಠಾಪಿಸುವಂತೆ ದೇವಿ ಬಾಲಾಜಿ ಅವರನ್ನು ಕೋರಿದಳು. ಅದರಂತೆ, ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಿ ಬಂಡಿ ಹಿಂದೆ ಬಂದ ಕಾರಣ ‘ಬಂಡಿ ಮಹಾಂಕಾಳಿ’ ಎಂತಲೂ, ಬನ್ನಿ ಮರದ ಕೆಳಗೆ ಪ್ರತಿಷ್ಠಾಪಿಸಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂದು ದೇವಿಯನ್ನು ಕರೆಯಲಾಗುತ್ತದೆ.

ಅಂದಿನಿಂದ ಕರಗ ಮಹೋತ್ಸವದ ಮೂಲಕ ದೇವಿಯನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಆರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶಿಸುತ್ತಿದ್ದರು. ಈಗ ಆರ್.ಎನ್. ಯೋಗೇಶ್ ಅವರು 20ನೇ ಬಾರಿಗೆ ಕರಗ ಧರಿಸುತ್ತಿದ್ದಾರೆ.

ನಗರದ ಮೊದಲ ಕರಗ: ‘ನಗರದಲ್ಲಿ ಬನ್ನಿ ಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಯಿತು. ಈಗ ಒಂಬತ್ತು ಕರಗಗಳ ಉತ್ಸವ ನಡೆಯುತ್ತದೆ. ಮುಂಚೆ ಮಧ್ಯರಾತ್ರಿ 2ಕ್ಕೆ ಶುರುವಾಗುತ್ತಿದ್ದ ಕರಗ ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ಅಗ್ನಿಕೊಂಡ ಪ್ರವೇಶಿಸುತ್ತಿತ್ತು. ಈಗ ನಗರದ ವ್ಯಾಪ್ತಿ ಹೆಚ್ಚಾಗಿರುವುದರಿಂದ ರಾತ್ರಿ 10 ಗಂಟೆಗೆ ದೇವಾಲಯದಿಂದ ಹೊರಡುವ ಕರಗ ಬೆಳಿಗ್ಗೆ 8 ಗಂಟೆ ಸುಮಾರಿಗೆ ಅಗ್ನಿಕೊಂಡ ಪ್ರವೇಶಿಸುತ್ತದೆ’ ಎಂದು ದೇವಾಲಯದ ಅರ್ಚಕ ಎಂ.ಎಸ್. ವಿನಯಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.