ADVERTISEMENT

ರಾಮನಗರ | ಸಂಭ್ರಮದ 'ಬನ್ನಿ ಮಹಾಂಕಾಳಿ ಕರಗ' ಮಹೋತ್ಸವ

ಬೀದಿಗಳಲ್ಲಿ ಸಂಚರಿಸಿದ ದೇವಿಯ ಕಣ್ತುಂಬಿಕೊಂಡ ಭಕ್ತರು; ಕೊಂಡೋತ್ಸವದಲ್ಲಿ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 6:20 IST
Last Updated 18 ಜುಲೈ 2024, 6:20 IST
ರಾಮನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ದೇವಿಯ ಕರಗ ಮತ್ತು ಅಗ್ನಿಕೊಂಡ ಮಹೋತ್ಸವದಲ್ಲಿ ಭಕ್ತರು ಕರಗವನ್ನು ಕಣ್ತುಂಬಿಕೊಂಡರು. ಯೋಗೇಶ್ ಅವರು ಕರಗ ಹೊತ್ತಿದ್ದರು
ರಾಮನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ದೇವಿಯ ಕರಗ ಮತ್ತು ಅಗ್ನಿಕೊಂಡ ಮಹೋತ್ಸವದಲ್ಲಿ ಭಕ್ತರು ಕರಗವನ್ನು ಕಣ್ತುಂಬಿಕೊಂಡರು. ಯೋಗೇಶ್ ಅವರು ಕರಗ ಹೊತ್ತಿದ್ದರು   

ರಾಮನಗರ: ನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ಮಂಗಳವಾರ ರಾತ್ರಿ ಅದ್ಧೂರಿಯಾಗಿ ಶುರುವಾಗಿ ಬುಧವಾರ ಸಂಪನ್ನಗೊಂಡಿತು. ಎರಡು ದಿನ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿಯಲ್ಲಿ ಪ್ರಾರ್ಥಿಸಿದರು.

ದೇವಾಲಯದ ಆವರಣದಿಂದ ಮಂಗಳವಾರ ರಾತ್ರಿ ಹೊರಟ ಕರಗವು, ನಗರದ ಪ್ರಮಖ ಬೀದಿಗಳಲ್ಲಿ ಸಂಚರಿಸಿತು. ತಮ್ಮ ಬಡಾವಣೆಗೆ ಬರುವ ಕರಗ ಸ್ವಾಗತಿಸುವುದಕ್ಕಾಗಿ ಸ್ಥಳೀಯರು ರಸ್ತೆಗಳನ್ನು ಸ್ವಚ್ಛಗೊಳಿಸಿ ಮನೆ ಮುಂದೆ ವಿಶೇಷ ರಂಗೋಲಿ ಹಾಕಿ ಹೂವಿನ ಸಿಂಗಾರ ಮಾಡಿದ್ದರು. ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯವು ವಿದ್ಯುದ್ದೀಪ ಮತ್ತು ಪುಷ್ಪಗಳಿಂದ ಅಲಂಕೃತಗೊಂಡಿತ್ತು.

ಬೀದಿಗಳಲ್ಲಿ ಸಂಚರಿಸಿದ ಕರಗವು, ಭಕ್ತರಿಂದ ಪೂಜೆ ಸ್ವೀಕರಿಸಿತು. ಹಣ್ಣು, ಕಾಯಿ ಹಾಗೂ ಹೂವು ಸಮರ್ಪಿಸಿದ ಭಕ್ತರು, ಇಷ್ಟಾರ್ಥ ನೆರವೇರಿಸುವಂತೆ ಕೋರಿಕೊಂಡರು. ರಾತ್ರಿಯಿಡೀ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಭಕ್ತರಿಂದದ ಪೂಜೆ ಸ್ವೀಕರಿಸಿದ ಕರಗವು ಬೆಳಿಗ್ಗೆ ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಅಗ್ನಿಕೊಂಡ ಪ್ರವೇಶಿಸಿ ದೇವಾಲಯ ತಲುಪಿತು. ನಂತರ ಭಕ್ತರು ಕೊಂಡಕ್ಕೆ ಉಪ್ಪು ಮತ್ತು ಮೆಣಸು ಹಾಕಿ ಹರಕೆ ತೀರಿಸಿದರು.

ADVERTISEMENT

ಕರಗ ಮತ್ತು ಅಗ್ನಿಕೊಂಡ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕೆಲ ಭಕ್ತರು ಸ್ವಯಂಪ್ರೇರಿತರಾಗಿ ಪ್ರಸಾದ ಸೇವೆ ಮಾಡಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು, ಪೂಜೆ ಸಲ್ಲಿಸಿದರು. ಯೋಗೇಶ್ ಅವರು ಕರಗಧಾರಕರಾಗಿದ್ದರು.

ಇದೇ ಸಂದರ್ಭದಲ್ಲಿ ನಗರದ ಚಾಮುಂಡೇಶ್ವರಿ, ಮಗ್ಗದ ಕೆರೆ ಮಾರಮ್ಮ, ಶೆಟ್ಟಿಹಳ್ಳಿ ಬೀದಿ, ಐಜೂರು– ಕೊಂಕಾಣಿದೊಡ್ಡಿ ಆದಿಶಕ್ತಿ, ಮುತ್ತು ಮಾರಮ್ಮ ಹಾಗೂ ಭಂಡಾರಮ್ಮ ಹಸಿ ಕರಗ ಅದ್ಧೂರಿಯಾಗಿ ಜರುಗಿತು. ಮುಂದಿನ ವಾರ ಕರಗ ಮಹೋತ್ಸವ ನಡೆಯಲಿದೆ. ಕರಗದ ಹಿನ್ನೆಲೆಯಲ್ಲಿ ಕಾಮಣ್ಣನ ಗುಡಿ ವೃತ್ತದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮವು ಜನರನ್ನು ರಂಜಿಸಿತು.

ರಾಮನಗರದ ಕಾಮಣ್ಣನ ಗುಡಿ ವೃತ್ತದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಗಮನ ಸೆಳೆದ ಜೂನಿಯರ್ ಅಂಬರೀಷ್ ಮತ್ತು ರಾಜಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.