ADVERTISEMENT

ಯಾರೂ ಸೋಲಿಸಲಾಗದ ಸರ್ವಾಧಿಕಾರಿ ‘ಸಾವು’: ಪ್ರೊ. ಬರಗೂರು ರಾಮಚಂದ್ರಪ್ಪ

ಸಾಮಾಜಿಕ ಹೋರಾಟಗಾರ ಭೈರಯ್ಯ ಸಂಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:05 IST
Last Updated 10 ಆಗಸ್ಟ್ 2025, 2:05 IST
ಹಾರೋಹಳ್ಳಿ ತಾಲ್ಲೂಕಿನ ವಡೇರಹಳ್ಳಿಯಲ್ಲಿ ಶನಿವಾರ ನಡೆದ ಸಾಮಾಜಿಕ ಹೋರಾಟಗಾರ ಭೈರಯ್ಯ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಗಣ್ಯರು ಭೈರಯ್ಯ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ, ಡಿಎಸ್‌ಎಸ್‌ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಭೈರಯ್ಯ ಅವರ ಪತ್ನಿ ಮಹಾದೇವಮ್ಮ, ಪುತ್ರ ಬಿ. ರಾಜಶೇಖರಮೂರ್ತಿ ಹಾಗೂ ಇತರರು ಇದ್ದಾರೆ
ಹಾರೋಹಳ್ಳಿ ತಾಲ್ಲೂಕಿನ ವಡೇರಹಳ್ಳಿಯಲ್ಲಿ ಶನಿವಾರ ನಡೆದ ಸಾಮಾಜಿಕ ಹೋರಾಟಗಾರ ಭೈರಯ್ಯ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಗಣ್ಯರು ಭೈರಯ್ಯ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ, ಡಿಎಸ್‌ಎಸ್‌ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಭೈರಯ್ಯ ಅವರ ಪತ್ನಿ ಮಹಾದೇವಮ್ಮ, ಪುತ್ರ ಬಿ. ರಾಜಶೇಖರಮೂರ್ತಿ ಹಾಗೂ ಇತರರು ಇದ್ದಾರೆ   

ಹಾರೋಹಳ್ಳಿ (ರಾಮನಗರ): ‘ಈ ಜಗತ್ತು ಹಲವು ಸರ್ವಾಧಿಕಾರಿಗಳನ್ನು ಕಂಡಿದೆ. ರಾಜ–ಮಹಾರಾಜರು ಅಂತಹ ಸರ್ವಾಧಿಕಾರಿಗಳ ಎದುರು ಸೋತು ತಲೆಬಾಗಿ ಬದುಕಿದ್ದಾರೆ. ಆದರೆ, ಯಾರೂ ಸೋಲಿಸಲಾಗದ ಸರ್ವಾಧಿಕಾರಿ ಯಾರಾದರೂ ಇದ್ದರೆ ಅದು ಸಾವು ಮಾತ್ರ. ಇದುವರೆಗೆ ಯಾರೂ ಅದನ್ನು ಗೆಲ್ಲಲು ಸಾಧ್ಯವಾಗಿಲ್ಲ’ ಎಂದು ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ವಡೇರಹಳ್ಳಿಯಲ್ಲಿ ಶನಿವಾರ ನಡೆದ ಸಾಮಾಜಿಕ ಹೋರಾಟಗಾರ ಭೈರಯ್ಯ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾವು ಮನುಷ್ಯನನ್ನು ಭೌತಿಕವಾಗಿ ಇಲ್ಲದಂತೆ ಮಾಡಬಲ್ಲದೇ ಹೊರತು, ಆತನ ಜೀವನಾದರ್ಶ ಹಾಗೂ ಹೋರಾಟಗಳನ್ನಲ್ಲ. ಅದೇ ಕಾರಣಕ್ಕೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಹಲವು ಮಹನೀಯರು ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ’ ಎಂದರು.

‘ಆದರ್ಶವಾದಿಯಾಗಿ ಬದುಕಿದ ಭೈರಯ್ಯ ಚಿಕ್ಕಂದಿನಿಂದಲೇ ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡವರು. ಅಸ್ಪೃಶ್ಯತೆಯ ನೋವುಂಡು ಬೆಳೆದವರು. ದಲಿತ ಸಮುದಾಯದ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಭೈರಯ್ಯ ಅವರು ನಮಗೆ ಕಾಣುತ್ತಾರೆ. ಅವರ ಪ್ರೇರಣೆಯಿಂದಾಗಿ ಮಕ್ಕಳು ಸಹ ಸಮಾಜಮುಖಿಯಾಗಿ ಬೆಳೆದಿದ್ದಾರೆ. ಅವರ ಆದರ್ಶವನ್ನು ಯುವಜನರು ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಜಗತ್ತಿನಲ್ಲಿ ಯಾರೂ ಶಾಶ್ವತರಲ್ಲ. ಆದರೆ, ಬದುಕಿದ್ದಾಗ ಮಾಡಿದ ಕಾರ್ಯಗಳು ಹಾಗೂ ವಿಚಾರಗಳು ಜಗತ್ತು ಅವರನ್ನು ನೆನೆಯುವಂತೆ ಮಾಡುತ್ತದೆ. ಡಾ. ಬಿ.ಆರ್. ಅಂಬೇಡ್ಕ್ ಅವರು ಹೇಳುವಂತೆ, ಎಷ್ಟು ಬದುಕಿದ್ದೆ ಎಂಬುದು ಮುಖ್ಯವಲ್ಲ. ಹೇಗೆ ಬದುಕಿದ್ದೆ ಎಂಬುದು ಮುಖ್ಯ’ ಎಂದು ತಿಳಿಸಿದರು.

‘ಭೈರಯ್ಯ ಅವರು ಎಲ್ಲರ ನೆನೆಪಿನಲ್ಲಿ ಉಳಿಯುವಂತೆ ಬದುಕಿ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಭೌತಿಕವಾಗಿ ನಮ್ಮನ್ನು ತ್ಯಜಿಸಿದ್ದಾರೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆ ಅಳವಡಿಸಿಕೊಂಡು ಜಾತಿರಹಿತ ಮತ್ತು ದೌರ್ಜನ್ಯ ರಹಿತ ಸೌಹಾರ್ದ ಸಮಾಜ ನಿರ್ಮಾಣದ ಆಶಯವನ್ನು ಈಡೇರಿಸಬೇಕು’ ಎಂದು ಹೇಲಿದರು.

ಗಣ್ಯರು ಭೈರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹೋರಾಟಗಾರ ಆರ್. ರಾಮಕೃಷ್ಣ, ಡಾ. ರಾಜು ಗುಂಡಾಪುರ, ಹರಿ, ಪುಟ್ಟಮಾದಯ್ಯ, ಸತ್ಯಮೂರ್ತಿ, ಶಿವಶಂಕರ್, ಭೈರಯ್ಯ ಅವರ ಪತ್ನಿ ಮಹಾದೇವಮ್ಮ, ಪುತ್ರರಾದ ಬಿ. ರಾಜಶೇಖರಮೂರ್ತಿ, ಬಿ. ರವಿಕುಮಾರ್, ಬಿ. ಗಂಗಾಧರ ಮೂರ್ತಿ, ಕುಟುಂಬದವರು ಹಾಗೂ ಇತರರು ಇದ್ದರು. ಪ್ರತೀಕ್ಷ ಆರ್. ಕಾರ್ಯಕ್ರಮ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.