ADVERTISEMENT

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಮಹಿಳೆಯಿಂದ ಸ್ವಾಮೀಜಿಗೆ ಬ್ಲಾಕ್‌ಮೇಲ್‌?

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 21:15 IST
Last Updated 25 ಅಕ್ಟೋಬರ್ 2022, 21:15 IST
   

ರಾಮನಗರ: ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರು ಹನಿಟ್ರ್ಯಾಪ್‌ಗೆ ಒಳಗಾಗಿದ್ದರೆ? ಮಹಿಳೆಯೊಬ್ಬರಿಂದ ಅವರು ಬ್ಲಾಕ್‌ಮೇಲ್‌ಗೆ ಒಳಗಾಗಿದ್ದರೆ?

ಶ್ರೀಗಳ ಆತ್ಮಹತ್ಯೆಯ ಬೆನ್ನಲ್ಲೇ ಇಂತಹ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಶ್ರೀಗಳ ಡೆತ್‌ನೋಟ್ ಎನ್ನಲಾದ ಕೈಬರಹದ ಪುಟ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮಹಿಳೆಯ ಉಲ್ಲೇಖವಿದ್ದು, ಆರೇಳು ತಿಂಗಳಿಂದಲೂ ಆಕೆ ಪೀಡಿಸುತ್ತಿದ್ದರು ಎಂದು ವಿವರಿಸಲಾಗಿದೆ.

ಪೊಲೀಸರ ಪ್ರಕಾರ, ಶ್ರೀಗಳು ಡೆತ್‌ನೋಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಂದ ಆಗುತ್ತಿರುವ ತೊಂದರೆ ಬಗ್ಗೆ ಪದೇ ಪದೇ ಉಲ್ಲೇಖಿಸಿದ್ದಾರೆ.

ADVERTISEMENT

‘ಸ್ವಾಮೀಜಿಯಾಗಿ 25 ವರ್ಷ ಕಳಂಕರಹಿತ ಜೀವನ ನಡೆಸಿದ್ದೆ. ಈಚೆಗೆ ಒಬ್ಬರು ಪದೇ ಪದೇ ತೊಂದರೆ ಕೊಡುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

ಆ ವ್ಯಕ್ತಿ ಮಾತ್ರವಲ್ಲದೆ, ಇನ್ನೂ ಹಲವರ ಹೆಸರೂ, ಮತ್ತೊಬ್ಬ ಶ್ರೀಗಳ ಹೆಸರೂ ಅದರಲ್ಲಿದೆ. ಆದರೆ, ತನಿಖೆಯ ದೃಷ್ಟಿಯಿಂದ ಆ ಹೆಸರುಗಳನ್ನು ಬಹಿರಂಗಗೊಳಿಸಲು ಆಗದು’ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀಗಳಿಗೆ ಆಗಾಗ್ಗೆ ಬೆದರಿಕೆ ಕರೆ ಬರುತ್ತಿತ್ತು ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಲ್ಲಿಎರಡು ಮೊಬೈಲ್‌ ಫೋನ್ ಸಿಕ್ಕಿವೆ. ಇವುಗಳು ತನಿಖೆಗೆ ಪ್ರಮುಖ ಸಾಕ್ಷ್ಯವಾಗಿವೆ. ಮೊಬೈಲ್‌ಗಳ ಪಾಸ್‌ವರ್ಡ್‌ ಭೇದಿಸಿ ಮಾಹಿತಿಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

ನಸುಕಿನಲ್ಲಿ ಆತ್ಮಹತ್ಯೆ:
ಆಪ್ತರು ಹೇಳುವಂತೆ ಶ್ರೀಗಳು ಭಾನುವಾರ ತಡರಾತ್ರಿವರೆಗೆ ಭಕ್ತರ ಜೊತೆ ಮಾತುಕತೆಯಲ್ಲಿ ನಿರತರಾಗಿದ್ದರು. ಹೀಗಾಗಿ, ಸೋಮವಾರ ನಸುಕಿನ 1ರಿಂದ 4 ಗಂಟೆ ನಡುವೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್‌ ಮೂಲಗಳು
ತಿಳಿಸಿವೆ.

ಆಪ್ತರು ಡೆತ್‌ನೋಟ್‌ ಎತ್ತಿಟ್ಟರೇ?

ಶ್ರೀಗಳ ಕೊಠಡಿಗೆ ಪೊಲೀಸರು ಹೋಗುವುದಕ್ಕೂ ಮುನ್ನವೇ ಡೆತ್‌ನೋಟ್ ಓದಲಾಗಿತ್ತು. ಶ್ರೀಗಳು 9 ಪುಟದ ಪತ್ರ ಬರೆದಿದ್ದು, ಆ ಪೈಕಿ ಆರು ಪುಟಗಳನ್ನು ಎತ್ತಿಟ್ಟು ಮೂರು ಪುಟಗಳನ್ನಷ್ಟೇ ಅಲ್ಲಿ ಇಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಆದರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಈ ವದಂತಿಯನ್ನು ನಿರಾಕರಿಸುತ್ತಾರೆ. ‘ಸದ್ಯ ಮೂರು ಪುಟಗಳ ಡೆತ್‌ನೋಟ್ ಸಿಕ್ಕಿದ್ದು, ಪರಿಪೂರ್ಣವಾಗಿವೆ. ಹೆಚ್ಚಿನ ಪುಟ ಇದ್ದರೆ ತನಿಖೆ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

****
ಬಸವಲಿಂಗ ಶ್ರೀ ಸಾವಿನ ಕುರಿತ ತನಿಖೆ ಪ್ರಗತಿಯಲ್ಲಿದೆ. ಮೂರು ಪುಟದ ಡೆತ್‌ನೋಟ್ ಅಷ್ಟೇ ಸಿಕ್ಕಿದೆ. ಹಲವರ ಹೆಸರು ಉಲ್ಲೇಖವಾಗಿದೆ.

-ಸಂತೋಷ್‌ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.