ರಾಮನಗರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆ. 23ರಂದು ಬಿಡಿಸಿಸಿ ಬ್ಯಾಂಕ್ ರೈತರಿಗೆ ಸಾಲಮೇಳ ಹಮ್ಮಿಕೊಂಡಿದ್ದು, ₹35 ಕೋಟಿಗೂ ಹೆಚ್ಚು ಮೊತ್ತದ ಸಾಲ ವಿತರಿಸಲಾಗುವುದು ಎಂದು ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು ಹೇಳಿದ್ದಾರೆ.
ರಾಮನಗರ, ಬಿಡದಿ ಹಾಗೂ ಶ್ಯಾನುಭೋಗನಹಳ್ಳಿ ಬ್ಯಾಂಕ್ ಶಾಖೆ ಸಹಯೋಗದಲ್ಲಿ ರೈತರಿಗೆ ಕೆಸಿಸಿ ಬೆಳೆಸಾಲ, ಹೈನುಗಾರಿಕೆ ಸಾಲ ಸೇರಿದಂತೆ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗುವುದು. ಇದೇ ವೇಳೆ ಗ್ರಾಹಕರ ದಿನಾಚರಣೆ ನಡೆಯಲಿದೆ ಎಂದು ನಗರದ ಅರ್ಚಕರಹಳ್ಳಿಯಲ್ಲಿರುವ ವಿಎಸ್‌ಎಸ್‌ಎನ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸುಮಾರು ₹10 ಕೋಟಿ ಸಾಲದ ಜೊತೆಗೆ ಹೈನುಗಾರಿಕೆ, ಕೋಳಿ, ಕುರಿ ಮತ್ತು ಹಂದಿ ಸಾಕಾಣಿಕೆಗೆ ₹10 ಕೋಟಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ರಾಮನಗರ ತಾಲ್ಲೂಕಿನ 21 ಸೊಸೈಟಿಗಳಿಗೆ ಕೆಸಿಸಿ ಬೆಳೆ ಸಾಲ ನೀಡಲಾಗುತ್ತಿದೆ. ಕಸಬಾ ಮತ್ತು ಕೈಲಾಂಚ ಹೋಬಳಿಯ ಸಂಘಗಳಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಬಿಡದಿ ಮತ್ತು ಕೂಟಗಲ್ ಭಾಗದ ಸೊಸೈಟಿಗಳಿಗೆ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಾಲದ ಚೆಕ್ ವಿತರಿಸಲಿದ್ದಾರೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡುವರು. ಬ್ಯಾಂಕ್ ಅಧ್ಯಕ್ಷ ಎಂ.ಡಿ. ವಿಜಯದೇವ್, ಮಾಗಡಿ ನಿರ್ದೇಶಕ ಎಚ್.ಎನ್. ಅಶೋಕ್, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಪಾಲ್ಗೊಳ್ಳುವರು ಎಂದು ಹೇಳಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸೂರಿ, ಮುಖಂಡರಾದ ಎಸ್.ಪಿ. ಜಗದೀಶ್, ಕೂಟಗಲ್ ನಾಗರಾಜು, ಮಹದೇವಯ್ಯ, ಕ್ಯಾಸಾಪುರ ಮಂಜುನಾಥ್, ಮರಿಸ್ವಾಮಿ, ಮೋಹನ್, ಪಂಚಾಕ್ಷರಿ, ಆನಂದ್ ಸುದ್ದಿಗೋಷ್ಠಿಯಲ್ಲಿದ್ದರು.
ಸಬ್ಸಿಡಿಗೆ ಕೇಂದ್ರದ ಕುತ್ತು
ಹಿಂದೆ ರೈತರಿಗೆ ನೀಡುವ ಕೆಸಿಸಿ ಬೆಳೆ ಸಾಲಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಲಾ ಶೇ 50ರಷ್ಟು ನೆರವು ಸಿಗುತ್ತಿತ್ತು. ಇದೀಗ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ರೈತರಿಗೆ ನೀಡುವ ಸಾಲಗಳ ಮೇಲಿನ ಸಬ್ಸಿಡಿಯನ್ನು ಆಯಾ ರಾಜ್ಯಗಳೇ ಭರಿಸಲಿ ಎಂದು ಸಹಕಾರ ಸಂಘಗಳಿಗೆ ನೀಡುತ್ತಿದ್ದ ಸಬ್ಸಿಡಿ ರದ್ದು ಮಾಡಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ. ರಾಜ್ಯ ಸರಕಾರವೇ ಟಿಎಪಿಸಿಎಂಎಸ್ ಮತ್ತು ವಿಎಸ್‍ಎಸ್‍ಎನ್‍ಗಳ ಮೂಲಕ ಗೊಬ್ಬರ ವಿತರಿಸಲು ಕ್ರಮವಹಿಸಿದೆ. ಬಿಡಿಸಿಸಿ ಬ್ಯಾಂಕ್‌ನಿಂದ ಸಬ್ಸಿಡಿ ದರದಲ್ಲಿ ಪಂಪ್‍ಸೆಟ್‌ಗೆ ಸಾಲ ನೀಡಲು ಚಿಂತನೆ ನಡೆದಿದೆ ಎಂದು ಮಂಜು ಹೇಳಿದರು. ರೈತರ ನೆರವಿಗೆ ನಿಂತಿರುವ ಬಿಡಿಸಿಸಿ ಬ್ಯಾಂಕ್ ನಬಾರ್ಡ್ ನೆರವಿನೊಂದಿಗೆ ಸಾಲಮೇಳ ಆಯೋಜಿಸಿದೆ. ನಬಾರ್ಡ್‍ನಿಂದ ಸಾಲ ಪಡೆದು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಹಿಂದೆ ವಾರ್ಷಿಕ ಶೇ 3ರ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ ₹1.20 ಲಕ್ಷ ಸಾಲದ ಮೊತ್ತವನ್ನು ಈ ಸಲ ₹1.70 ಲಕ್ಷದವರೆಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.