ADVERTISEMENT

ರಾಮನಗರ: ಜಾಲತಾಣಗಳ ಬಗ್ಗೆ ಇರಲಿ ಎಚ್ಚರ, ಕೋಮು ಸೌಹಾರ್ದ ಕದಡಿದರೆ ಪ್ರಕರಣ

ಆರ್.ಜಿತೇಂದ್ರ
Published 9 ಏಪ್ರಿಲ್ 2020, 19:30 IST
Last Updated 9 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸೋ ಇಚ್ಛೆ ಸಂದೇಶ ಹರಡುವವರೇ ಜೋಕೆ! ನಿಮ್ಮ ಪೋಸ್ಟ್‌, ಕಮೆಂಟುಗಳು ಸಮಾಜದ ಸ್ವಾಸ್ಥ್ಯ ಕದಡುವಂತೆ ಇದ್ದರೆ ಜೈಲು ಪಾಲಾಗುವುದು ಖಚಿತ.

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಸಂದೇಶಗಳನ್ನು ಹರಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿವೆ.

ಈಚೆಗೆ ಜಾಲತಾಣಗಳಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಆಗುವಂತೆ ಒಂದಿಷ್ಟು ಜನರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇದರಿಂದ ಸಮಾಜದಲ್ಲಿನ ಶಾಂತಿ-ಸುವ್ಯವಸ್ಥೆ ಹಾಗೂ ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ ಜೈಲಿಗಟ್ಟುವ ಕೆಲಸವನ್ನು ಪೊಲೀಸರು ಸದ್ದಿಲ್ಲದೇ ನಡೆಸಿದ್ದಾರೆ.

ADVERTISEMENT

ಹದ್ದಿನ ಕಣ್ಣು: ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ಮೇಲೆ ಜಿಲ್ಲೆಯ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅದರಲ್ಲೂ ಫೇಸ್‌ಬುಕ್‌ನಂತಹ ಜನಪ್ರಿಯ ಜಾಲತಾಣಗಳಲ್ಲಿ ಕೋಮು ಸೌಹಾರ್ದ ಕೆಡಿಸುವ, ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್‌ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಂತಹ ಅಪರಾಧಗಳ ಪತ್ತೆ ಮತ್ತು ತನಿಖೆಗೆಂದೇ ಪ್ರತ್ಯೇಕ ಪೊಲೀಸ್‌ ತಂಡವಿದ್ದು, ಅವರು ಜಾಲತಾಣಗಳಲ್ಲಿ ಶೋಧ ನಡೆಸಿದ್ದಾರೆ. ಜೊತೆಗೆ ಗುಪ್ತಚರ, ಆಂತರಿಕ ಭದ್ರತೆ ಮೊದಲಾದ ವಿಭಾಗದ ಪೊಲೀಸರು ಇಂತಹ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ವಾರ್ತಾ ಇಲಾಖೆಯ ನೇತೃತ್ವದಲ್ಲಿ ‘ಕೊರೊನಾ ಸೈನಿಕರು’ ಪಡೆಯೂ ರಚನೆಯಾಗಿದ್ದು, ಈ ತಂಡವು ಇಂತಹ ವದಂತಿಗಳನ್ನು ಪತ್ತೆ ಹಚ್ಚುವ ಹಾಗೂ ಆ ಬಗ್ಗೆ ಜನರಲ್ಲಿ ಎಚ್ಚರಿಸುವ ಕೆಲಸ ಮಾಡುತ್ತಿದೆ.

ಏನು ಮಾಡಬೇಕು?: ಇಂದು ಬಹುತೇಕ ಜನರು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಅವರಲ್ಲಿ ಬಹುತೇಕರಿಗೆ ಜಾಲತಾಣಗಳ ದುರ್ಬಳಕೆ ಬಗ್ಗೆ ಅರಿವಿನ ಕೊರತೆ ಇದೆ. ಇದರಿಂದಾಗಿ ತಮಗೆ ಗೊತ್ತಿಲ್ಲದೆಯೇ ತಪ್ಪು ಸಂದೇಶ ಹರಡಲು ತಾವೂ ಜವಾಬ್ದಾರರಾಗುತ್ತಿದ್ದಾರೆ ಎನ್ನುತ್ತಾರೆ ಜಿಲ್ಲೆಯ ಪೊಲೀಸರು.

ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಅಥವಾ ವಿಡಿಯೊ, ಚಿತ್ರಗಳನ್ನು ಹಾಕುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು. ಇನ್ನೊಬ್ಬರ ನಿಂದನೆ, ಭಾವನೆಗಳಿಗೆ ಧಕ್ಕೆ ಆಗುವಂತಹ ಬರಹಗಳನ್ನು ಪ್ರಕಟಿಸಬಾರದು. ಯಾವುದೇ ಪ್ರಚೋದನಾಕಾರಿ ಸಂದೇಶಗಳನ್ನು ಹರಡಬಾರದು.

ವಾಟ್ಸ್‌ ಆ್ಯಪ್‌, ಟೆಲಿಗ್ರಾಂ ಮೊದಲಾದ ತಂತ್ರಾಂಶಗಳಿಗೆ ಸಂದೇಶಗಳನ್ನು ಇನ್ನೊಂದು ಗುಂಪಿಗೆ ಫಾರ್ವಡ್‌ ಮಾಡಬಾರದು. ಕೊರೊನಾದಿಂದ ಅಲ್ಲಿ ಅಷ್ಟು ಜನ ಸತ್ತಿದ್ದಾರೆ. ಇಲ್ಲಿ ಹೀಗೆಲ್ಲ ಆಗಿದೆ ಎಂದು ಬರುವ ನಕಲಿ ಸಂದೇಶಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಬಾರದು. ಗ್ರೂಪ್‌ ಅಡ್ಮಿನ್‌ಗಳು ಇಂತಹ ಸಂದೇಶಗಳು ಹರಡದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅವರನ್ನೇ ಹೊಣೆ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸುತ್ತಾರೆ.

ಇಬ್ಬರು ಜೈಲುಪಾಲು:ರಾಮನಗರ ತಾಲ್ಲೂಕಿನ ಅಂಕನಹಳ್ಳಿಯಲ್ಲಿ ಸಮಾಜದಲ್ಲಿ ದ್ವೇಷ ಭಾವನೆ ಉಂಟು ಮಾಡುವ ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟ ಆರೋಪದ ಮೇಲೆ ಇಬ್ಬರನ್ನು ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಊರಿನಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತಮಟೆ ಮೂಲಕ ಸಂದೇಶ ಸಾರಲಾಗಿತ್ತು. ಇದನ್ನು ವಿಡಿಯೊ ಮಾಡಿಕೊಂಡು ವಾಟ್ಸ್‌ಆ್ಯಪ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಈ ವಿಡಿಯೊದಲ್ಲಿರುವ ವ್ಯಕ್ತಿ ಹಾಗೂ ಅದರ ಪ್ರಚಾರಕ್ಕೆ ಪ್ರಚೋದನೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್‌ 153ಎ, 505 ಅಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.