ರಾಮನಗರ: ನಗರ ಸಮೀಪದ ವಡೇರಹಳ್ಳಿ ಬಳಿಯ ಖಾಸಗಿ ಜಮೀನೊಂದರಲ್ಲಿ ಅನಾರೋಗ್ಯದಿಂದಾಗಿ ನಿತ್ರಾಣಗೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಪ್ರಾಥಮಿಕ ಆರೈಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳಿಸಿ ಕೊಟ್ಟಿದ್ದಾರೆ.
ಸುಮಾರು ಒಂದು ವರ್ಷದ ಕರಡಿ ಹಂದಿಗೊಂದಿ ಅರಣ್ಯ ವಲಯದ ಬಸವನಪುರ ಬಳಿಯ ಬೆಟ್ಟದ ಕಡೆಯಿಂದ ಆಹಾರ ಅರಸಿಕೊಂಡು ಜಮೀನಿಗೆ ಬಂದಿತ್ತು.ನಿತ್ರಾಣಗೊಂಡಿದ್ದ ಕರಡಿಗೆ ವಾಪಸ್ ಹೋಗಲಾಗದೆ ಜಮೀನಿನ ಗಿಡಮರಗಲ ಮಧ್ಯೆಯೇ ಇತ್ತು. ಅದನ್ನು ಗಮನಿಸಿದ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕರಡಿಗೆ ಅನಾರೋಗ್ಯ ಇರುವುದು ಗೊತ್ತಾಯಿತು. ಸ್ಥಳಕ್ಕೆ ಬನ್ನೇರುಘಟ್ಟದಿಂದ ವೈದ್ಯರನ್ನು ಕರೆಯಿರಿ, ಕರಡಿಗೆ ಅರಿವಳಿಕೆ ಚುಚ್ಚುಮದ್ಧು ನೀಡಿ, ಅದರ ಆರೋಗ್ಯವನ್ನು ಪರಿಶೀಲಿಸಲಾಯಿತು. ಆಹಾರ ಸೇವಿಸದ ಕರಡಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳಿಸಿ ಕೊಡಲಾಯಿತು ಎಂದು ಹೇಳಿದರು.
ಡಿಸಿಎಫ್ ಎಂ. ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್, ಬನ್ನೇರುಘಟ್ಟ ಪಶುವೈದ್ಯ ಡಾ. ಉಮಾಶಂಕರ್, ಅರಣ್ಯ ರಕ್ಷಕ ಶಾಂತಕುಮಾರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.