
ರಾಮನಗರ: ನಗರದ ಬೀಡಿ ಕಾಲೋನಿ ಕುಟುಂಬಗಳಿಗೆ 15 ದಿನದೊಳಗೆ ಮನೆಗಳ ಹಕ್ಕುಪತ್ರ ವಿತರಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಎಚ್ಚರಿಕೆ ನೀಡಿದರು.
ನಗರದ ಬೀಡಿ ಕಾಲೋನಿಯಲ್ಲಿ ರಾಮನಗರ ಟೌನ್ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ಶನಿವಾರ ಸಂಜೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಫಲಾನುಭವಿ ಬೀಡಿ ಕಾರ್ಮಿಕರಿಗೆ ಅಸಲಿ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಫಲಾನುಭವಿಗಳಿಗೆ ಬೀಡಿ ಕಾರ್ಮಿಕರಿಗೆ ಹಕ್ಕುಪತ್ರಗಳ ನಕಲು ಪ್ರತಿ ನೀಡಲಾಗಿದೆ.ಅಸಲಿ ಹಕ್ಕು ಪತ್ರ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು. ಇಲ್ಲದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತೇವೆ ಎಂದರು.
‘ರಾಜೀವ್ ಗಾಂಧಿ ವಸತಿ ನಿಗಮದವರು ತಾಲ್ಲೂಕು ಆಡಳಿತಕ್ಕೆ ಮತ್ತು ಅವರು ರಾಮನಗರ ನಗರಸಭೆಗೆ ಹಕ್ಕುಪತ್ರ ಹಸ್ತಾಂತರಿಸಿದ್ದಾರೆ. ಆ ಹಕ್ಕುಪತ್ರಗಳ ಜೆರಾಕ್ಸ್ ಪ್ರತಿ ಪಡೆದಿದ್ದೇನೆ. ನಗರಸಭೆಯಲ್ಲಿದ್ದ ಅಸಲಿ ಹಕ್ಕುಪತ್ರ ಕಳುವಾಗಿವೆ ಎಂದು ಅಧಿಕಾರಿಗಳು ನನ್ನ ಬಳಿಯಿದ್ದ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಂಡು ಅವುಗಳನ್ನೇ ಕಲರ್ ಜೆರಾಕ್ಸ್ ಮಾಡಿಸಿ ಮಾರ್ಚ್ 8ರಂದು ಬೀಡಿ ಕಾರ್ಮಿಕರಿಗೆ ನೀಡಿ ವಂಚಿಸಿದ್ದಾರೆ’ ಎಂದು ಆರೋಪಿಸಿದರು.
ಹಕ್ಕುಪತ್ರಗಳ ನಕಲು ಪ್ರತಿಗಳಿಂದ ನೋಂದಣಿ ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ನಲ್ಲಿ ಸಾಲಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ಬೀಡಿ ಕಾರ್ಮಿಕರು ಅಸಲಿ ಹಕ್ಕುಪತ್ರ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದರು.
ನಗರಸಭೆ ಸದಸ್ಯರಾದ ದೌಲತ್ ಷರೀಫ್, ಅಕ್ಲಿಮ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಫರ್ವೀಜ್ ಪಾಷಾ, ಮಹಮ್ಮದ್ ಇಸ್ಮಾಯಿಲ್, ಅಮ್ಜದ್ ಸಾಹುಕರ್, ಪ್ಯಾರಿ ಫಯಾಜ್, ಮೋಸಿನ್, ಅತಾವುಲ್ಲಾ, ಅಮ್ಜದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.