ADVERTISEMENT

ಚನ್ನಪಟ್ಟಣ | ಗೋಮಾಂಸ ಮಾರಾಟ: ಸ್ವಯಂ ಸೇವಾಸಂಸ್ಥೆ ಸದಸ್ಯರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 2:46 IST
Last Updated 16 ಮೇ 2022, 2:46 IST

ಚನ್ನಪಟ್ಟಣ: ನಗರದ ಇಂದಿರಾ ಕಾಟೇಜ್‌ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಪಶು ವೈದ್ಯಾಧಿಕಾರಿಯೊಂದಿಗೆ ಭೇಟಿ ನೀಡಿ ಗೋಮಾಂಸ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ ಬೆಂಗಳೂರು ಮೂಲದ ಸ್ವಯಂ ಸೇವಾಸಂಸ್ಥೆ ಗೋ ಗ್ಯಾನ್ ಫೌಂಡೇಷನ್‌ನ ಇಬ್ಬರು ಸದಸ್ಯರ ಮೇಲೆ ಕಸಾಯಿಖಾನೆಯ ಮಾಲೀಕ ಮತ್ತವರ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.

ನಗರದ ಇಂದಿರಾ ಕಾಟೇಜ್, ಬೀಡಿ ಕಾಲೊನಿ ಸೇರಿದಂತೆ ವಿವಿಧ ಕಡೆ ನಡೆಯುತ್ತಿದ್ದ ಕಸಾಯಿಖಾನೆಗಳಿಗೆ ಭೇಟಿ ನೀಡಿದ ಸ್ವಯಂ ಸೇವಾಸಂಸ್ಥೆಯ ಸದಸ್ಯರು ಪರಿಶೀಲನೆ ನಡೆಸಿದರು. ಇಂದಿರಾ ಕಾಟೇಜ್ ನ ಕಸಾಯಿಖಾನೆಯನ್ನು ತಪಾಸಣೆ ಮಾಡಲು ಮುಂದಾದಾಗ ಸ್ಥಳೀಯರು ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದಿರಾ ಕಾಟೇಜ್ ನಲ್ಲಿ ಪರಿಶೀಲನೆ ನಡೆಸುವ ಸಮಯದಲ್ಲಿ ಸ್ವಯಂ ಸೇವಾಸಂಸ್ಥೆಯ ಸದಸ್ಯರ ಕಾರ್ಯಕ್ಕೆ ಅಡ್ಡಿಪಡಿಸಿದ ಸ್ಥಳೀಯರ ಗುಂಪು, ನಂತರ ಹಲ್ಲೆ ಮಾಡಿದೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಇದ್ದರು. ಇದಕ್ಕೆ ಆ ಗುಂಪು ಹೆದರದೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸ್ವಯಂ ಸೇವಾಸಂಸ್ಥೆ ಇಬ್ಬರು ಸದಸ್ಯರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.

ADVERTISEMENT

ಸ್ವಯಂ ಸೇವಾಸಂಸ್ಥೆಯ ಸದಸ್ಯರು ಅಂಗಡಿಗಳನ್ನು ತಪಾಸಣೆ ಮಾಡಿದ ವೇಳೆ ಗೋವಧೆ ಮಾಡುತ್ತಿರುವುದು ಪತ್ತೆಯಾಗಿದೆ. ಕಸಾಯಿಖಾನೆಯಲ್ಲಿದ್ದ 5 ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ನಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಹಲವಾರು ಗೋವುಗಳ ಚರ್ಮ ಹಾಗೂ ಒಂದು ಟನ್ ಗೂ ಹೆಚ್ಚು ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಸ್ವಯಂ ಸೇವಾಸಂಸ್ಥೆಯ ಸದಸ್ಯರ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.