ADVERTISEMENT

‘ದೊಡ್ಡ ಪಕ್ಷಗಳು ಬಂಡವಾಳಶಾಹಿ ಪರ’

ಎಸ್‌ಯುಸಿಐ ಅಭ್ಯರ್ಥಿ ಟಿ.ಸಿ. ರಮಾ ಬೆಂಬಲಿಸಲು ಪಕ್ಷದ ಮುಖಂಡರ ಮನವಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 13:16 IST
Last Updated 4 ಏಪ್ರಿಲ್ 2019, 13:16 IST
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಸ್‌ಯುಸಿಐ ಮುಖಂಡರಾದ ಎಂ.ಎನ್. ಶ್ರೀರಾಮ್‌ ಮಾತನಾಡಿದರು
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಸ್‌ಯುಸಿಐ ಮುಖಂಡರಾದ ಎಂ.ಎನ್. ಶ್ರೀರಾಮ್‌ ಮಾತನಾಡಿದರು   

ರಾಮನಗರ: ‘ದೊಡ್ಡ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳ ಪರವಾಗಿ ವರ್ತಿಸುತ್ತಿದ್ದು, ಇದಕ್ಕೆ ರಾಜಕೀಯ ಹೋರಾಟವೇ ಮದ್ದಾಗಿದೆ’ ಎಂದು ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ಇಂಡಿಯಾ (ಕಮ್ಯೂನಿಸ್ಟ್‌) ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಎನ್. ಶ್ರೀರಾಮ್‌ ಹೇಳಿದರು.

‘ದೇಶ ಹಾಗೂ ರಾಜ್ಯದಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಈಗಾಗಲೇ ಅಧಿಕಾರ ಅನುಭವಿಸಿವೆ. ಆದರೆ ಜನರಿಗೆ ಬೇಕಾದ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿವೆ. ಪ್ರಧಾನಿ ಮೋದಿ ಹೇಳಿದಂತೆ ಯಾರೊಬ್ಬರ ಖಾತೆಗೂ ₨15 ಲಕ್ಷ ಜಮೆ ಆಗಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಕ್ಕಿಲ್ಲ. ಈ ವರ್ಷ ಕಳೆದ 45 ವರ್ಷಗಳಲ್ಲೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ರಾಜಕೀಯ ಬದಲಾವಣೆಯ ಅಗತ್ಯವಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್‌ ವರದಿ ಜಾರಿಗೆ ತರಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಜಾರಿಯಾಗಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಸ್‌ಯುಸಿಐನಿಂದ 118 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಜ್ಯದಲ್ಲೂ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್‌ಗೆ ಪಕ್ಷವು ಬೆಂಬಲ ನೀಡಲಿದೆ’ ಎಂದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎಸ್‌ಯುಸಿಐ ಅಭ್ಯರ್ಥಿಯಾಗಿ ಟಿ.ಸಿ. ರಮಾ ಅಭ್ಯರ್ಥಿಯಾಗಿದ್ದಾರೆ. ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿದಂತೆ ಹಲವು ಜನಪರ ಮತ್ತು ಕಾರ್ಮಿಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದಾರೆ. ಎಐಯುಟಿಸಿಯುಸಿ ರಾಜ್ಯ ಸಂಘಟನಾಕಾರರಾಗಿರುವ ಅವರು ವಿದ್ಯಾರ್ಥಿ ದಿಸೆಯಿಂದಲೂ ಹೋರಾಟ ಮೈಗೂಡಿಸಿಕೊಂಡಿದ್ದಾರೆ. ಕ್ಷೇತ್ರದ ಜನರು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ಟಿ.ಸಿ. ರಮಾ ಮಾತನಾಡಿ ‘ಸಭೆಗಳು, ಜನಸಂಪರ್ಕ ಕಾರ್ಯಕ್ರಮಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ನಡೆದಿದೆ. ಈಗಾಗಲೇ 30ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲಾಗಿದೆ. ಇದೇ 13ರಂದು ರಾಮನಗರದಲ್ಲಿ ಬಹಿರಂಗ ಸಮಾವೇಶ ಆಯೋಜನೆಗೆ ಚಿಂತನೆ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಕ್ಷೇತ್ರದಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಉಪನಗರ ರೈಲು ವ್ಯವಸ್ಥೆ, ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮೊದಲಾದ ಉದ್ದೇಶಗಳನ್ನು ಮುಂದಿಟ್ಟುಕೊಂಡು ಮತದಾರರಿಗೆ ಮನವರಿಕೆ ಮಾಡಲಾಗುತ್ತಿದೆ’ ಎಂದರು.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯರಾದ ಶೋಭಾ ಹಾಗೂ ದಾನಂಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.