ADVERTISEMENT

ಚನ್ನಪಟ್ಟಣ: ಕಾಡಾನೆ ಕಾರ್ಯಾಚರಣೆಗೆ 4 ಕಿ.ಮೀ. ಗೆ ಒಬ್ಬ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:31 IST
Last Updated 7 ಫೆಬ್ರುವರಿ 2026, 4:31 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದ ತೋಟದಲ್ಲಿ ಅರಣ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡುವಾಗ, ರೈತ ಮಹಿಳೆಯೊಬ್ಬರು ಕಾಡಾನೆ ಹಾವಳಿಯಿಂದ ಆಗುತ್ತಿರುವ ಸಂಕಷ್ಟದ ಕುರಿತು ಅಳಲು ತೋಡಿಕೊಂಡರು.</p></div>

ಚನ್ನಪಟ್ಟಣ ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದ ತೋಟದಲ್ಲಿ ಅರಣ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡುವಾಗ, ರೈತ ಮಹಿಳೆಯೊಬ್ಬರು ಕಾಡಾನೆ ಹಾವಳಿಯಿಂದ ಆಗುತ್ತಿರುವ ಸಂಕಷ್ಟದ ಕುರಿತು ಅಳಲು ತೋಡಿಕೊಂಡರು.

   

ಚನ್ನಪಟ್ಟಣ: ‘ಬೆಂಗಳೂರು ದಕ್ಷಿಣ ಜಿಲ್ಲೆಯ ಅರಣ್ಯ ಗಡಿಭಾಗದಲ್ಲಿ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಗಾಗಿ ಸುಮಾರು 4 ಕಿಲೋಮೀಟರ್‌ಗೆ ಒಬ್ಬರಂತೆ 90 ಸಿಬ್ಬಂದಿಯನ್ನು ನೇಮಿಸಲಾಗಿದೆ. ಜೊತೆಗೆ ಡ್ರೋಣ್ ಬಳಸಿ ಕಾಡಾನೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹೇಳಿದರು.

ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದ ಬಳಿಯ ರೈತರ ತೋಟದಲ್ಲಿ ಅರಣ್ಯ ಇಲಾಖೆ ಶುಕ್ರವಾರ ಆಯೋಜಿಸಿದ್ದ ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ರೈತರ ಅಹವಾಲು ಆಲಿಸಿ ಮಾತನಾಡಿದ ಅವರು, ‘ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಿ, ಶಾಶ್ವತ ಪರಿಹಾರ ದೊರಕಿಸಲು ಸರ್ಕಾರ ಹಾಗೂ ಅರಣ್ಯ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ’ ಎಂದರು.

ADVERTISEMENT

‘ಸಭೆಯಲ್ಲಿ ರೈತರು ಮಾಡಿರುವ ವಿವಿಧ ಒತ್ತಾಯ, ಬೇಡಿಕೆ ಜೊತೆಗೆ ಅಭಿಪ್ರಾಯಗಳನ್ನು ಪಟ್ಟಿಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ಬೇಡಿಕೆಗಳ ಅನುಷ್ಠಾನದ ಸಾಧ್ಯತೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮ್ಮಳ್ಳಿದೊಡ್ಡಿ ಮಹೇಶ್ ಗೌಡ ಅವರು, ಕಾಡಾನೆಗಳ ದಾಳಿಯಿಂದ ಈ ಭಾಗದಲ್ಲಿ ರೈತರಿಗೆ ಆಗುತ್ತಿರುವ ನಷ್ಟ ಮತ್ತು ತೊಂದರೆಯನ್ನು ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ತೆರೆದಿಟ್ಟರು. ಕಾಡಾನೆಗಳ ನಿಯಂತ್ರಣದ ಜೊತೆಗೆ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ಜೊತೆಗೆ ವಿಧಾನಸೌಧಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಾಡಾನೆಗಳಿಂದ ಆದ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರದ ಹಣ ಅಲ್ಪವಾಗಿದೆ. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಶೇ 75ರಷ್ಟು ಪರಿಹಾರ ಕೊಡಿಸಬೇಕು. ಇದರ ಬದಲು, ಕಾಡಾನೆ ಹಾವಳಿ ಇರುವ ಜಮೀನುಗಳನ್ನು ಇಲಾಖೆಯೇ ವಹಿಸಿಕೊಂಡು ವರ್ಷಕ್ಕೆ ಇಂತಿಷ್ಟು ಮೊತ್ತವನ್ನು ಬಾಡಿಗೆ ರೂಪದಲ್ಲಿ ಕೊಡಬೇಕು ಎಂದು ಸಭೆಯಲ್ಲಿದ್ದ ರೈತ ಮಹಿಳೆಯರು ಒತ್ತಾಯಿಸಿದರು.

ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಬಿ.ವಿ. ಹಳ್ಳಿ, ಅಮ್ಮಳ್ಳಿದೊಡ್ಡಿ ಹಾಗೂ ಸುತ್ತ ಮುತ್ತಲಿನ ಗ್ರಾಮದಲ್ಲಿನ ರೈತರ ಜಮೀನುಗಳ ಮೇಲೆ ಕಾಡಾನೆಗಳು ನಿರಂತರವಾಗಿ ದಾಳಿ ಮಾಡಿ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ, ರೈತರು ಫೆ. 3ರಂದು ರಸ್ತೆತಡೆ ನಡೆಸಿದ್ದರು.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸುವ ಭರವಸೆ ನೀಡಿದ್ದರು. ಅದರಂತೆ ಇಂದು ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಡಿವೈಎಸ್ಪಿ ಗಿರಿ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ್, ರವಿಕಿರಣ್, ಅರಣ್ಯ ಇಲಾಖೆ ಅಧಿಕಾರಿಗಳು, ರೈತ ಮುಖಂಡರಾದ ಸಿ. ಪುಟ್ಟಸ್ವಾಮಿ, ಕೆ. ಮಲ್ಲಯ್ಯ, ಕೆ.ಎನ್. ರಾಜು, ಅಮ್ಮಳ್ಳಿದೊಡ್ಡಿ ರಘು, ಶಿವಮಲ್ಲಯ್ಯ, ಕೃಷ್ಣಪ್ಪ, ರಮೇಶ್, ಶ್ರೀನಿವಾಸ್, ಲಿಂಗರಾಜೇಗೌಡ, ಸ್ಥಳೀಯ ಮುಖಂಡರು, ರೈತರು, ಮಹಿಳೆಯರು  ಇದ್ದರು.

ಸಭೆಯಲ್ಲಿ ವಿಷ ಕುಡಿಯಲು ಯತ್ನಿಸಿದ ರೈತ ಪುಟ್ಟಪ್ಪ ಅವರಿಂದ ಅಧಿಕಾರಿಗಳು ವಿಷದ ಬಾಟಲಿ ಕಸಿದುಕೊಂಡರು 
ಸಭೆಯಲ್ಲಿ ಭಾಗವಹಿಸಿದ್ದ ರೈತರು

ವಿಷ ಕುಡಿಯಲೆತ್ನಿಸಿದ ರೈತ

ಕಾಡಾನೆ ದಾಳಿಗೆ ಬೇಸತ್ತ ಬಿ.ವಿ.ಹಳ್ಳಿ ಗ್ರಾಮದ ರೈತ ಪುಟ್ಟಪ್ಪ ಅವರು ಸಭೆಯ ನಡೆಯುವಾಗ ಅಧಿಕಾರಿಗಳ ಸಮ್ಮುಖದಲ್ಲೇ ವಿಷಯ ಕುಡಿಯಲು ಯತ್ನಿಸಿದರು. ಸಭೆ ಶುರುವಾಗುತ್ತಿದ್ದಂತೆ ಪುಟ್ಟಪ್ಪ ಅವರು ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಳೆದುಕೊಂಡಿದ್ದೇನೆ. ಈ ಭಾಗದ ನೂರಾರು ರೈತರ ಸ್ಥಿತಿಯೂ ನನಗಿಂತ ಬೇರೆ ಇಲ್ಲ. ಕಾಡಾನೆ ಹಾವಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕು. ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಕೈಯಲ್ಲಿದ್ದ ವಿಷದ ಬಾಟಲಿಯ ಮುಚ್ಚಳ ತೆಗೆದು ಕುಡಿಯಲೆತ್ನಿಸಿದರು. ತಕ್ಷಣ ಅಧಿಕಾರಿಗಳು ಹಾಗೂ ಪೊಲೀಸರು ವಿಷದ ಬಾಟಲಿ ಕಸಿದುಕೊಂಡು ಸಮಾಧಾನಪಡಿಸಿದರು.

ಬೀಡು ಬಿಟ್ಟಿವೆ 500 ಕಾಡಾನೆ!

‘ಬೆಂಗಳೂರು ದಕ್ಷಿಣ ಜಿಲ್ಲೆಯು 358 ಕಿ.ಮೀ. ಅರಣ್ಯ ಗಡಿಭಾಗ ಹೊಂದಿದ್ದು ಸುಮಾರು 500ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಇವುಗಳಲ್ಲಿ ಸುಮಾರು 30ರಿಂದ 40 ಕಾಡಾನೆಗಳ ಉಪಟಳ ಈ ಭಾಗದಲ್ಲಿ ಹೆಚ್ಚಾಗಿದೆ. ಅವುಗಳ ನಿಯಂತ್ರಣಕ್ಕಾಗಿ ರೈಲ್ವೆ ಬ್ಯಾರಿಕೇಡ್ ಸೌರವಿದ್ಯುತ್‌ ತಂತಿ ನಿರ್ಮಾಣ ಗಡಿಭಾಗದಲ್ಲಿ ಕಾಡಾನೆಗಳನ್ನು ಓಡಿಸಲು ಸುಮಾರು  90 ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಹಿಂದೆ ಅರಣ್ಯ ಸಚಿವರು ಹಾಗೂ ಈ ಭಾಗದ ಶಾಸಕರು ರೈತರ ಸಭೆಯನ್ನು ನಡೆಸಿದ್ದರು. ಕಾಡಾನೆಗಳ ನಿಯಂತ್ರಣ ಮತ್ತು ಶಾಶ್ವತ ಪರಿಹಾರಕ್ಕಾಗಿ ಸುಮಾರು ₹300 ಕೋಟಿ ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಯೋಜನೆಯಡಿ 150ರಿಂದ 170 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ಪೂರಕವಾಗಿ ಇತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ರೈತರು ಸಹಕರಿಸಬೇಕು’ ಎಂದು ಶಿವಶಂಕರ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.