ಆತ್ಮಹತ್ಯೆ ಮಾಡಿಕೊಂಡ ನೌಕರ ಕುಮಾರ್ ಕೆ.
ರಾಮನಗರ: ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯಿಂದ ಡಿಜಿಟಲ್ ಅರೆಸ್ಟ್ ಮತ್ತು ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಸುಮಾರು ₹11 ಲಕ್ಷ ಕಳೆದುಕೊಂಡ ಬೆಸ್ಕಾಂನ ‘ಡಿ’ ಗ್ರೂಪ್ ನೌಕರರೊಬ್ಬರು, ಆತನ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಮಳೂರು ಹೋಬಳಿಯ ಕೆಲಗೇರಿಯ ಕುಮಾರ್ ಕೆ. (48) ಜೀವ ಕಳೆದುಕೊಂಡವರು. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಕುಮಾರ್ ಅವರು ಗುತ್ತಿಗೆ ಆಧಾರದ ಮೇಲೆ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು.
ಘಟನೆ ಕುರಿತು ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 108ರಡಿ (ಆತ್ಮಹತ್ಯೆಗೆ ಪ್ರಚೋದನೆ) ಜುಲೈ 15ರಂದು ಪ್ರಕರಣ ದಾಖಲಾಗಿದೆ. ತಮ್ಮ ತೋಟದಲ್ಲಿ ನೇಣಿಗೆ ಶರಣಾಗಿರುವ ಕುಮಾರ್, ತಮ್ಮ ಸಾವಿಗೆ ಸಿಬಿಐ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯ ಕಾಟವೇ ಕಾರಣ ಎಂದು ಮರಣಪತ್ರ ಬರೆದಿಟ್ಟಿದ್ದಾರೆ.
ವಾರೆಂಟ್ ಹೆಸರಲ್ಲಿ ಬೆದರಿಕೆ: ಎಚ್ಎಸ್‌ಆರ್ ಲೇಔಟ್‌ನಲ್ಲಿ ಸುಮಾರು 30 ವರ್ಷಗಳಿಂದ ಪತ್ನಿ ಮತ್ತು ಪುತ್ರನೊಂದಿಗೆ ಕುಮಾರ್ ನೆಲೆಸಿದ್ದರು. ಇತ್ತೀಚೆಗೆ ಅವರ ಮೊಬೈಲ್ ಸಂಖ್ಯೆಗೆ ಸಿಬಿಐ ಅಧಿಕಾರಿ ಹೆಸರಿನಲ್ಲಿ ವಿಕ್ರಂ ಗೋಸ್ವಾಮಿ ಎಂಬ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ನಿಮ್ಮ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ ಎಂದು ಹೆದರಿಸಿದ್ದ.
ಪ್ರಕರಣದಿಂದ ನಿಮ್ಮ ಹೆಸರು ಬಿಡಬೇಕಾದರೆ ನನ್ನ ಖಾತೆಗೆ ₹1.95 ಲಕ್ಷ ಪಾವತಿಸಬೇಕು ಎಂದು ಹೇಳಿದ್ದ. ಆತನ ಮಾತನ್ನು ನಿಜವೆಂದು ನಂಬಿ ಬೆದರಿದ್ದ ಕುಮಾರ್ ಹಣ ಪಾವತಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಆತ ಈ ವಿಷಯವನ್ನು ಯಾರಿಗೂ ತಿಳಿಸದಂತೆ, ಕುಮಾರ್ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣಕ್ಕಾಗಿ ಮತ್ತೆ ಮತ್ತೆ ಬೇಡಿಕೆ ಇಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.
₹11 ಲಕ್ಷ ಕಿತ್ತಿದ್ದ: ಪ್ರಕರಣದಿಂದ ಪಾರಾಗಲು ಕುಮಾರ್ ಅವರು ವಿವಿಧೆಡೆ ಸಾಲ ಮಾಡಿ ಸುಮಾರು ₹11 ಲಕ್ಷವನ್ನು ನಕಲಿ ಸಿಬಿಐ ಅಧಿಕಾರಿ ಹೇಳಿದ ಮೊಬೈಲ್ ಸಂಖ್ಯೆಗಳಿಗೆ ಆನ್‌ಲೈನ್ ಮೂಲಕ ವರ್ಗಾಯಿಸಿದ್ದರು. ಆದರೂ ಬಿಡದ ಆತ, ಮತ್ತೆ ₹2.75 ಲಕ್ಷ ವರ್ಗಾವಣೆ ಮಾಡು ಎಂದು ಕಾಟ ನೀಡುತ್ತಿದ್ದ. ಇಲ್ಲದಿದ್ದರೆ ನಿನ್ನನ್ನು ಅರೆಸ್ಟ್ ಮಾಡುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಇಷ್ಟಾದರೂ ಕುಮಾರ್ ಅವರು ವಿಷಯವನ್ನು ಯಾರಿಗೂ ಹೇಳದೆ ಕಿರುಕುಳ ಅನುಭವಿಸುತ್ತಿದ್ದರು. ಜುಲೈ 14ರಂದು ಬೆಳಿಗ್ಗೆ ಕಾರ್ಯನಿಮಿತ್ತ ಊರಿಗೆ ಹೋಗಿ ಬರುವುದಾಗಿ ಪತ್ನಿ ಸಾವಿತ್ರಮ್ಮ ಅವರಿಗೆ ಕೆಲಗೇರಿಗೆ ಬಂದಿದ್ದರು. ಅಂದು ರಾತ್ರಿ 9.30ರ ಸುಮಾರಿಗೆ ಪತ್ನಿಗೆ ಕರೆ ಮಾಡಿ ಮಾತನಾಡಿದ್ದ ಅವರು, ರಾತ್ರಿಯೇ ತಮ್ಮ ಜಮೀನಲ್ಲಿರುವ ತೆಂಗಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಪ್ರಕರಣ ‘ಸೈಬರ್’ಗೆ ವರ್ಗ: ಆತ್ಮಹತ್ಯೆಗೂ ಮುಂಚೆ ಮರಣಪತ್ರ ಬರೆದಿಟ್ಟಿರುವ ಕುಮಾರ್ ಅವರು, ಅದನ್ನು ತಮ್ಮ ಜೇಬಿನಲ್ಲಿಟ್ಟುಕೊಂಡಿದ್ದಾರೆ. ತಮ್ಮ ಸಾವಿಗೆ ಸಿಬಿಐ ಅಧಿಕಾರಿ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಿರುವ ವ್ಯಕ್ತಿಯ ಕಾಟವೇ ಕಾರಣ ಎಂದು ಪತ್ರದಲ್ಲಿ ಬರೆದಿರುವ ಅವರು, ಆತನ ಹೆಸರು, ಮೊಬೈಲ್ ಸಂಖ್ಯೆ ಹಾಗೂ ತಾವು ಕಳಿಸಿದ್ದ ಹಣದ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.
ಕುಮಾರ್ ಅವರ ಮೊಬೈಲ್ ಸಂಖ್ಯೆಗೆ ಉತ್ತರಪ್ರದೇಶ ಮತ್ತು ಹರಿಯಾಣದಿಂದ ಕರೆಗಳು ಬಂದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇದು ಆನ್‌ಲೈನ್ ವಂಚನೆಯಾಗಿರುವುದರಿಂದ ಪ್ರಕರಣವನ್ನು ರಾಮನಗರದ ಸಿಇನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾತ್ರಿಯಷ್ಟೇ ಬರುತ್ತಿದ್ದ ಕರೆ; ಅರೆಬರೆ ಹಿಂದಿಯಲ್ಲಿ ಮಾತು
ಆತ್ಮಹತ್ಯೆಗೆ ಹದಿನೈದು ದಿನ ಮುಂಚೆ ಕುಮಾರ್ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ವ್ಯಕ್ತಿಯೊಬ್ಬರ ಬಳಿ ಅರೆಬರೆ ಹಿಂದಿಯಲ್ಲಿ ಭಯದಿಂದ ಮಾತನಾಡುತ್ತಿದ್ದರು. ರಾತ್ರಿಯೇ ಹೆಚ್ಚಾಗಿ ಕರೆ ಬರುತ್ತಿತ್ತು. ಆಗ ಕುಮಾರ್ ಅವರು ಹೊರಕ್ಕೆ ಎದ್ದು ಹೋಗಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಪತ್ನಿ, ‘ಏನಾಗಿದೆ?’ ಎಂದು ಕೇಳಿದ್ದರು. ಆಗ ಕುಮಾರ್, ‘ಯಾರೊ ಹಿಂದಿಯವರು ಕಾಲ್ ಮಾಡಿದ್ದರು. ಇಂದು ₹5 ಲಕ್ಷ ಕೊಟ್ಟರೆ, ನಾಳೆಯೇ ₹75 ಲಕ್ಷ ಕೊಡುತ್ತಾರೆ. ಹಾಗಾಗಿ, ನಿನ್ನ ಒಡವೆಗಳನ್ನು ಕೊಡು. ಅಡವಿಟ್ಟು ದುಡ್ಡು ಕೊಟ್ಟರೆ ₹75 ಲಕ್ಷ ಸಿಗುತ್ತದೆ’ ಎಂದಿದ್ದರು ಎಂದು ಕುಮಾರ್ ಸಹೋದರ ಶಂಕರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಅದಕ್ಕೆ ಪತ್ನಿ, ‘ನಿಮ್ಮಿಂದ ದುಡ್ಡು ಕೀಳಲು ಯಾರೋ ಸುಳ್ಳು ಹೇಳಿ ನಿಮ್ಮನ್ನು ಯಾಮಾರಿಸುತ್ತಿದ್ದಾರೆ. ಇದನ್ನೆಲ್ಲಾ ನಂಬಬೇಡಿ. ಯಾವುದಕ್ಕೂ ಈ ವಿಷಯವನ್ನು ನಿಮ್ಮ ತಮ್ಮ ಶಂಕರೇಗೌಡ ಅವರಿಗೆ ತಿಳಿಸಿ’ ಎಂದಿದ್ದರು. ಆಗ ಕುಮಾರ್, ‘ಯಾವುದೇ ಕಾರಣಕ್ಕೂ ಅವನಿಗೆ ವಿಷಯ ಹೇಳಬೇಡ’ ಎಂದಿದ್ದರು. ಆದರೂ ಪತ್ನಿ, ತಮ್ಮ ಕಡೆಯವರಿಗೆ ತಿಳಿಸಿದಾಗ, ಅವರೆಲ್ಲರೂ ಕರೆ ಮಾಡಿ ಈ ರೀತಿ ಬರುವ ಕರೆಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಬುದ್ಧಿವಾದ ಹೇಳಿದ್ದರು. ಇಬ್ಬರೂ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ನನಗೂ ಒಂದು ಮಾತು ಹೇಳಿರಲಿಲ್ಲ ಎಂದು ಕಣ್ಣೀರು ಹಾಕಿದರು.
ಮಗನನ್ನು ಚನ್ನಾಗಿ ನೋಡಿಕೊಳ್ಳಿ!
ಮರಣಪತ್ರದಲ್ಲಿ ತಮ್ಮ ತಂದೆ, ಸಹೋದರ ಹಾಗೂ ಕುಟುಂಬದ ಇತರರ ಹೆಸರನ್ನು ಬರೆದಿರುವ ಕುಮಾರ್ ಅವರು, ‘ನನ್ನ ಮಗನನ್ನು ಚನ್ನಾಗಿ ನೋಡಿಕೊಳ್ಳಿ. ಆತನಿಗೆ ತಂದೆ ಇಲ್ಲ ಎಂಬ ಬಾಧೆ ಬರಬಾರದು ಎಂದು ನಾನು ನಿಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ’ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಸತೀಶ ಎಂಬುವರಿಗೆ ‘ನಿನ್ನ ಅಕ್ಕ ಮತ್ತು ಮಗನನ್ನು ಕೈ ಬಿಡಬೇಡ’ ಎಂದು ಕೋರಿರುವ ಕುಮಾರ್ ಅವರು, ಪತ್ರದ ಕೊನೆಯಲ್ಲಿ ‘ಇಂತಿ ನಿಮ್ಮ ನತದೃಷ್ಟ ಕುಮಾರ್’ ಎಂದು ಬರೆದಿದ್ದಾರೆ.
ಸುಮಾರು 35 ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ, ಗ್ರಾಮ ಪಂಚಾಯಿತಿಯ ಧನಸಹಾಯದಲ್ಲಿ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದ. ಇತ್ತೀಚೆಗೆ ಅಡಿಪಾಯ ಹಾಕುವ ಕೆಲಸ ಮುಗಿಸಿದ್ದ ಆತ, ಅದಕ್ಕೆ ಪಂಚಾಯಿತಿಯಿಂದ ಅನುದಾನ ಬಂದಿದೆಯೇ ಎಂಬುದರ ಕುರಿತು ವಿಚಾರಿಸುವುದಕ್ಕಾಗಿ ಉರಿಗೆ ಬಂದಿದ್ದ. ಮಧ್ಯಾಹ್ನ ಕರೆ ಮಾಡಿ, ಬೆಂಗಳೂರಿಗೆ ಬರುವುದು ತಡವಾಗುತ್ತದೆ. ಹಾಗಾಗಿ, ಮಗನನ್ನು ಶಾಲೆಯಿಂದ ಕರೆದುಕೊಂಡು ಬಾ ಎಂದಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಕರೆ ಮಾಡಿ ಎಂದಿನಂತೆ ಮಾತನಾಡಿದ್ದ. ಆಗಲು ತನ್ನ ಸಮಸ್ಯೆ ಹೇಳಿಕೊಂಡಿರಲಿಲ್ಲ. 10.30ರ ಸುಮಾರಿಗೆ ನಮ್ಮ ಅತ್ತಿಗೆಗೆ ಕರೆ ಮಾಡಿ ಪುತ್ರನೊಂದಿಗೆ ಮಾತನಾಡಬೇಕು ಎಂದಿದ್ದ. ಆದರೆ, ಮಗ ಮಲಗಿದ್ದರಿಂದ ಬೆಳಿಗ್ಗೆ ಕರೆ ಮಾಡಿ ಎಂದು ಹೇಳಿದ್ದರು ಎಂದು ಕುಮಾರ್ ಅವರ ಸಹೋದರ ಶಂಕರೇಗೌಡ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ಕುಮಾರ್ ಅವರ ಜೇಬಿನಲ್ಲಿ ಸಿಕ್ಕ ಮರಣಪತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.