ADVERTISEMENT

ಚನ್ನಪಟ್ಟಣ | ಅ.3ಕ್ಕೆ ಬೇವೂರು ತಿಮ್ಮಪ್ಪ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 3:11 IST
Last Updated 24 ಸೆಪ್ಟೆಂಬರ್ 2025, 3:11 IST
ತಿಮ್ಮಪ್ಪಸ್ವಾಮಿ
ತಿಮ್ಮಪ್ಪಸ್ವಾಮಿ   

ಚನ್ನಪಟ್ಟಣ: ತಾಲ್ಲೂಕಿನ ಬೇವೂರು ಗ್ರಾಮದ ಇತಿಹಾಸ ಪ್ರಸಿದ್ಧ ಬೆಟ್ಟದ ತಿಮ್ಮಪ್ಪಸ್ವಾಮಿ ಬ್ರಹ್ಮರಥೋತ್ಸವ ಅ.3 ರಂದು ನಡೆಯಲಿದ್ದು, ಸೆ.22 ರಿಂದ ದೇವತಾಕಾರ್ಯಗಳು ಆರಂಭಗೊಂಡಿವೆ.

ಸೆ.22 ರಿಂದ ಸೆ.30ರವರೆಗೆ ಒಂಬತ್ತು ದಿನಗಳ ಕಾಲ ನವರಾತ್ರಿ ಪೂಜಾ ಕಾರ್ಯಕ್ರಮ. ಅ.1 ರಂದು ಆಯುಧಪೂಜೆ ನಡೆಯಲಿದೆ. ಅ. 2 ರಂದು ವಿಜಯದಶಮಿ ಪ್ರಯುಕ್ತ ಮುಂಜಾನೆಯಿಂದ ಸಂಜೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಸಂಜೆ 7ಕ್ಕೆ ದೇವರ ಉತ್ಸವ ನಡೆಯಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಹಾಗೂ ಹರಿಕಥೆ ಆಯೋಜಿಸಲಾಗಿದೆ.

ಅ.3 ರಂದು ಬೆಳಗ್ಗೆ 9.30 ರಿಂದ 10.30ರವರೆಗೆ ರಥಶಾಂತಿ ಪೂಜೆ ನಡೆಯಲಿದೆ. ತಮಟೆ, ನಗಾರಿ ವಾದ್ಯ, ಪೂಜಾಕುಣಿತ, ವೀರಗಾಸೆ, ಗಾರುಡಿ ಗೊಂಬೆ ಕುಣಿತ, ರಥಕ್ಕೆ ಹೂವಿನ ಅಲಂಕಾರ, ಜಂಡೆ ಕುಣಿತದ ಸೇವೆಯೊಂದಿಗೆ ಮಧ್ಯಾಹ್ನ 12.30 ರಿಂದ 1.40 ರ ಶುಭ ಧನಸ್ಸು ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.

ADVERTISEMENT

ಮಧ್ಯಾಹ್ನ 2 ಗಂಟೆಗೆ ಗಜೋತ್ಸವ, 3 ಗಂಟೆಗೆ ಗರಡೋತ್ಸವ, ಸಂಜೆ 6.30 ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಜೊತೆಗೆ ಬೇವೂರು ಗ್ರಾಮದ ಸಮಸ್ತ ಕುಂಬಾರಶೆಟ್ಟರಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಜೊತೆಗೆ ಸಿಡಿಮದ್ದು ಸೇವೆ, ಶಯನೋತ್ಸವ, ತೋಮಾಲೆ ಸೇವೆ ನಡೆಯಲಿದೆ.

ಬೇವೂರು ಮಠದ ಮೃತ್ಯಂಜಯ ಶಿವಾಚಾರ್ಯ ಸ್ವಾಮಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಾ.ಸಿ.ಎನ್. ಮಂಜುನಾಥ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವರು.

ಬ್ರಹ್ಮರಥೋತ್ಸವವು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಲ್ಲಾ ಉಪವಿಭಾಗಾಧಿಕಾರಿ ಬಿನೋಯ್, ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ, ತಹಶೀಲ್ದಾರ್ ಬಿ.ಎನ್.ಗಿರೀಶ್ ಇತರ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಮೇಲ್ವಿಚಾರಕ ಬಿ.ಸಿ. ಪುಟ್ಟಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.