ADVERTISEMENT

ಏಳು ವರ್ಷದಿಂದ ಘಟಕ ಸ್ಥಗಿತ: ಭಾರ್ಗಾವತಿ ಕೆರೆ ಶುದ್ಧೀಕರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮೇ 2021, 5:10 IST
Last Updated 2 ಮೇ 2021, 5:10 IST
ಮಾಗಡಿ ತಾಲ್ಲೂಕಿನ ಪರಂಗಿಚಿಕ್ಕನಪಾಳ್ಯದ ಬಳಿ ಇರುವ ಭಾರ್ಗಾವತಿ ಕೆರೆ
ಮಾಗಡಿ ತಾಲ್ಲೂಕಿನ ಪರಂಗಿಚಿಕ್ಕನಪಾಳ್ಯದ ಬಳಿ ಇರುವ ಭಾರ್ಗಾವತಿ ಕೆರೆ   

ಮಾಗಡಿ: ರೈತಾಪಿ ವರ್ಗದವರ ಬದುಕಿಗೆ ಜೀವನಾಡಿಯಾಗಿರುವ ಭಾರ್ಗಾವತಿ ಕೆರೆಗೆ ಹರಿಯುತ್ತಿರುವ ಪಟ್ಟಣದ ಒಳಚರಂಡಿ ನೀರನ್ನು ಸ್ಥಗಿತಗೊಳಿಸಿ ಕೆರೆ ಶುದ್ಧೀಕರಣಗೊಳಿಸಬೇಕು ಎಂದು ಜಿಲ್ಲಾ ಜಾಗೃತ ಸಮಿತಿ ಸದಸ್ಯ ದೊಡ್ಡಯ್ಯ ಒತ್ತಾಯಿಸಿದರು.

ಪರಂಗಿ ಚಿಕ್ಕನಪಾಳ್ಯದ ಬಳಿ ಇರುವ ಭಾರ್ಗಾವತಿ ಕೆರೆ ಮತ್ತು ನೀರಿನ ಶುದ್ಧೀಕರಣ ಘಟಕಕ್ಕೆ ಭಾನುವಾರ ಸ್ಥಳೀಯ ಗ್ರಾಮಸ್ಥರ ಮನವಿಗೆ ಮೇರೆಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಪುರಸಭೆಯಿಂದ 2014ರಲ್ಲಿ ಬಹುಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಒಳಚರಂಡಿ ಪೈಪ್‌ಗಳ ಅಳವಡಿಕೆ ಆರಂಭವಾಯಿತು. ಭೂಮಟ್ಟ ಗುರುತಿಸಿ, ಸರಿಯಾಗಿ ಇಳಿಜಾರಿನ ಕಡೆ ನಕ್ಷೆ ತಯಾರಿಸದೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವೈಜ್ಞಾನಿಕ ಕಳಪೆ ಕಾಮಗಾರಿ ನಡೆದಿದೆ. ಅಂದಿನಿಂದ ಪಟ್ಟಣದಲ್ಲಿ ಒಂದಲ್ಲ ಒಂದು ಕಡೆ ಒಳಚರಂಡಿ ಚೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ದೂರಿದರು.

ADVERTISEMENT

ಪುರ ಗ್ರಾಮದ ಎತ್ತರ ಪ್ರದೇಶದ ಮೇಲೆ ಒಳಚರಂಡಿ ಯೋಜನೆಯಡಿ 3.70 ಎಂಎಲ್‌ಡಿ ಸಾಮರ್ಥ್ಯದ ಮಲಿನ ನೀರಿನ ಶುದ್ಧೀಕರಣ ಘಟಕದ ನಿರ್ಮಿಸಿದರು. ಭಾರ್ಗಾವತಿ ಕೆರೆ ಅಂಚಿನಲ್ಲಿ ಕಲುಷಿತ ನೀರನ್ನು ಶುದ್ಧೀಕರಣಗೊಳಿಸುವ ವೆಟ್‌ವೆಲ್‌ ಪಂಪ್‌ಹೌಸ್ ನಿರ್ಮಿಸಿ ಕೈತೊಳೆದುಕೊಂಡರು. ವೆಟ್‌ವೆಲ್‌ನಿಂದ ಶುದ್ಧೀಕರಣ ಘಟಕ ಎತ್ತರದಲ್ಲಿದೆ. ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಹರಿಯುವ ಬದಲು ಕೆರೆಯ ಅಂಗಳಕ್ಕೆ ಹರಿಯುತ್ತಿದೆ ಎಂದು ದೂರಿದರು.

ಒಳಚರಂಡಿಯ ಕಲುಷಿತ ನೀರು ಶುದ್ಧೀಕರಣ ಘಟಕಕ್ಕೆ ಸೇರುತ್ತಿಲ್ಲ. ಕೆರೆಗೆ ಸೇರಿ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಕೆರೆಯ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಕಪ್ಪುಬಣ್ಣದ ವಾಸನೆಯಿಂದ ಕೂಡಿದ ನೀರು ಬರುತ್ತಿದೆ. ಪರಂಗಿ ಚಿಕ್ಕನಪಾಳ್ಯದಲ್ಲಿ ಕುಡಿಯುವ ನೀರಿಗೆ ಇನ್ನಿಲ್ಲದ ಪರದಾಟವಿದೆ ಎಂದು ಆರೋಪಿಸಿದರು.

ಹೋರಾಟ: ಕೆರೆಗೆ 7 ವರ್ಷಗಳಿಂದಲೂ ಒಳಚರಂಡಿ ನೀರನ್ನು ಹರಿಯ ಬಿಟ್ಟಿರುವುದನ್ನು ತಕ್ಷಣ ನಿಲ್ಲಿಸಬೇಕು. ಕೆರೆಯ ಪಾವಿತ್ರ್ಯ ಉಳಿಸುವಂತೆ ಹಲವು ಭಾರಿ ಹೋರಾಟ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಕೆರೆಗೆ ಕಲುಷಿತ ಹರಿಯುವುದನ್ನು ತಡೆಯಲು ಮುಂದಾಗಬೇಕು ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಆಗ್ರಹಿಸಿದರು.

‘ಪುರ ಗ್ರಾಮದ ರಸ್ತೆಯ ಬಳಿ ನಿರ್ಮಿಸಿರುವ ಮಲಿನ ನೀರು ಶುದ್ಧೀಕರಣ ಘಟಕಕ್ಕೆ 7 ವರ್ಷ ಕಳೆದರೂ ಒಳಚರಂಡಿಯ ನೀರು ಹರಿಯುತ್ತಿಲ್ಲ. ಕೆರೆಯ ಒಡಲು ಸೇರಿ ಕೆರೆಯಲ್ಲಿ 4 ಅಡಿ ಎತ್ತರದ ಹೂಳು ತುಂಬಿದೆ’ ಎಂದು ರೈತ ಸಂಘದ ಮುಖಂಡ ಚನ್ನರಾಯಪ್ಪ ತಿಳಿಸಿದರು.

‘ಪರಂಗಿ ಚಿಕ್ಕನಪಾಳ್ಯ, ಪುರ, ಮಾಡಬಾಳ್, ಉಡುವೆಗೆರೆ, ನೇತೇನ ಹಳ್ಳಿ, ನೆಸೆಪಾಳ್ಯ, ಗುಮ್ಮಸಂದ್ರ ಗ್ರಾಮದ ನಿವಾಸಿಗಳಿಗೆ ಕೆರೆ ಮಲಿನತೆಯಿಂದ ಕೆಟ್ಟವಾಸನೆ ಬೀರುತ್ತಿದೆ. ಕೆರೆಗೆ ಹರಿ ಯುತ್ತಿರುವ ಶೌಚಾಲಯದ ನೀರನ್ನು ತಡೆಗಟ್ಟಬೇಕು. ಕೆರೆಯನ್ನು ಶುದ್ಧೀಕರಿಸಬೇಕು’ ಎಂದು ಹೋರಾಟಗಾರ ಗಂಗರಾಜು ಮನವಿ ಮಾಡಿದರು.

ಒಳಚರಂಡಿ ಕಾಮಗಾರಿಯನ್ನು ಪುರಸಭೆಗೆ ಒಪ್ಪಿಸಿದ್ದೇವೆ. ಅವರೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಒಳಚರಂಡಿ ಮಂಡಳಿಯ ಅಧಿಕಾರಿಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.