ADVERTISEMENT

ಕಾಯಕಲ್ಪ ನಿರೀಕ್ಷೆಯಲ್ಲಿ ಭಾರ್ಗಾವತಿ ಕೆರೆ

ನರೇಗಾ ಯೋಜನೆಯಡಿ ಜಲಮೂಲ ಉಳಿಸಿ * ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಬೇಸರ

ದೊಡ್ಡಬಾಣಗೆರೆ ಮಾರಣ್ಣ
Published 2 ಮಾರ್ಚ್ 2019, 13:13 IST
Last Updated 2 ಮಾರ್ಚ್ 2019, 13:13 IST
ಮಾಗಡಿ ಭಾರ್ಗಾವತಿ ಕೆರೆಯ ನೋಟ
ಮಾಗಡಿ ಭಾರ್ಗಾವತಿ ಕೆರೆಯ ನೋಟ   

ಮಾಗಡಿ: ರೈತರ ತವನಿಧಿಯಂತಿರುವ ಭಾರ್ಗಾವತಿ ಕೆರೆ ಏರಿ ಮತ್ತು ತೂಬಿನಲ್ಲಿ ತೂತು ಬಿದ್ದು ನೀರು ಪೋಲಾಗುತ್ತಿದೆ.

ಜಲ ಮೂಲಗಳನ್ನು ರಕ್ಷಿಸಿದಿದ್ದರೆ ಮುಂದಿನ ದಿನಮಾನಗಳಲ್ಲಿ ಪಶುಪಕ್ಷಿಗಳಿಗೂ ಕುಡಿಯಲು ನೀರಿಲ್ಲದೆ ಪರಿತಪಿಸುವ ಪರಿಸ್ಥಿತಿ ಎದುರಾಗಲಿದೆ.

ಭಾರ್ಗಾವತಿ ಕೆರೆಗೂ ಐತಿಹಾಸಿಕ ಹಿನ್ನೆಲೆ ಇದೆ. ಗಗನಧಾರ್ಯ ಎಂಬ ಗುರು ಮುಮ್ಮಡಿ ಕೆಂಪೇಗೌಡರಿಗೆ ಲಿಂಗಧಾರಣೆ ಮಾಡಿಸಿ, 64 ಶರಣ ಮಠಗಳ ನಿರ್ಮಿಸಿದರು ಎಂಬ ಐತಿಹ್ಯ ಇದೆ. ಉಡುವೆಗೆರೆ ಸಾಧ್ವಿ ಶಿರೋಮಣಿ ಭಾರ್ಗಾವತಿಯನ್ನು ವಿವಾಹವಾದ ಮುಮ್ಮಡಿ ಕೆಂಪೇಗೌಡ, ತನ್ನ ಮುದ್ದಿನ ಮಡದಿ ಸವಿನೆನಪಿಗಾಗಿ ಅರ್ಕಾವತಿ, ಕಣ್ವ ನದಿಗಳ ಸಂಗಮ ಸ್ಥಳದಲ್ಲಿ ಕೋಡಿಮಠವ ಕಟ್ಟಿಸಿ, ಬೃಹತ್‌ ಕೆರೆಯೊಂದನ್ನು ಸ್ಥಳೀಯ ಬೋವಿಗಳ ಸಹಕಾರದಿಂದ ಕಟ್ಟಿಸಿ ಪತ್ನಿ ಹೆಸರು ನಾಮಕರಣ ಮಾಡಿದರು. ವರ್ಷಪೂರ್ತಿ ನೀರಿನಿಂದ ತುಂಬಿ ತುಳುಕುವ ಭಾರ್ಗಾವತಿ ಕೆರೆ ವಿಶಾಲವಾಗಿದೆ. ಎರಡು ತೂಬುಗಳಿವೆ. ಕೆರೆ ಕೆಳಗೆ ನೂರಾರು ಎಕೆರೆ ಅಚ್ಚುಕಟ್ಟು ಪ್ರದೇಶವಿದೆ.

ADVERTISEMENT

ಇಲ್ಲಿ ಕೋಡಿ ಮಲ್ಲೇಶ್ವರ ದೇಗುಲವಿದೆ. ಕೆರೆ ಕೆಳಗೆ ಪರಂಗಿ ಚಿಕ್ಕನಪಾಳ್ಯ, ಪುರ, ಉಡುವೆಗೆರೆ, ನೇತೇನಹಳ್ಳಿ, ಮಾಡಬಾಳ್‌ ಗ್ರಾಮಗಳಿಗೆ ಸೇರಿದ ರೈತರಿಗೆ ಭೂಮಿ ಉಂಬಳಿಯಾಗಿ ನೀಡಲಾಗಿದೆ. ಈ ಹಿಂದೆ ಕೆರೆ ತುಂಬಿದಾಗ ಕೋಡಿ ಮಲ್ಲೇಶ್ವರಸ್ವಾಮಿ ತೆಪ್ಪೋತ್ಸವ, ದನಗಳ ಜಾತ್ರೆ ನಡೆಯುತ್ತಿದ್ದ ನೆನಪುಗಳನ್ನು ಮೆಲುಕು ಹಾಕಿದರು ಹಿರಿಯರಾದ ಮಾರಪ್ಪ.

ಈಗಾಗಲೇ ಕೆರೆ ದುರಸ್ತಿ ನೆಪದಲ್ಲಿ ಹಣ ಖರ್ಚಾಗಿದೆ. ಆದರೆ, ದುರಸ್ತಿಯಾಗಿಲ್ಲ. ಇದರಿಂದ ನೀರು ಹರಿದು ಪೋಲಾಗುತ್ತಿದೆ. ಗಿಡಗಂಟಿಗಳು ಬೆಳೆದು ನೀರು ಜಿನುಗುತ್ತಿದೆ.‌ ನೇತೇನಹಳ್ಳಿ ಮತ್ತು ಮಾಡಬಾಳ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕೆರೆ ಕೆಳಗಿನ ಅಚ್ಚುಕಟ್ಟು ಪ್ರದೇಶ ಸೇರುತ್ತದೆ. ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆ ಅಧಿಕಾರಿಗಳು ಪ್ರತಿವರ್ಷ ವಾರ್ಷಿಕ ದುರಸ್ತಿಗಾಗಿ ಹಣ ಖರ್ಚು ಮಾಡುತ್ತಲೇ ಇದ್ದಾರೆ.

ರೈತ ಶಿವರಾಮಯ್ಯ ಮಾತನಾಡಿ, ಕೆರೆ ನೀರು ಪೋಲಾಗುವುದನ್ನು ತಡೆಯಲು ಕಾಲುವೆಗಳನ್ನು ದುರಸ್ತಿ ಮಾಡಿಸಿ, ನೀರಗಂಟಿ ನೇಮಕ ಮಾಡಬೇಕು ಎಂದರು.

ಪರಂಗಿ ಚಿಕ್ಕನಪಾಳ್ಯದ ಮಂಜಮ್ಮ ಮಾತನಾಡಿ, ಭಾರ್ಗಾವತಿ ಕೆರೆ ನೀರಿನಲ್ಲೇ ಮಹಿಳೆಯರು ಗಂಗಮ್ಮದೇವಿಯನ್ನು ಪೂಜಿಸಿಕೊಂಡು ಬರುವುದು ವಾಡಿಕೆಯಾಗಿತ್ತು. ಈಗ ಒಳಚರಂಡಿ ಕಲುಷಿತ ನೀರು ಸೇರಿದ್ದು, ನೀರು ಮುಟ್ಟಿದರೆ ಮೈಮೇಲೆ ಗುಳ್ಳೆಗಳು ಏಳುತ್ತಿವೆ. ಕೆರೆ ಜಲಮೂಲ ಉಳಿಸಲು ಶಾಸಕ ಎ.ಮಂಜುನಾಥ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮುತ್ತಯ್ಯ, ಶಾಂತರಾಜು, ಶ್ರೀನಿವಾಸ್‌, ಸೀನಪ್ಪ, ಗೀತಾ, ಗೌರಮ್ಮ, ಪಾರ್ವತಮ್ಮ, ರೂಪಾ, ಬಿಂದು, ಅಂಜಲಿ, ಅನಿತಾ, ಸುಧಾ ತಂಡದವರು ಕೆರೆ ಉಳಿಸಲು ಹೋರಾಟ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.