ADVERTISEMENT

ಬಿಡದಿ: ಎಲ್ಲಿ ನೋಡಿದರಲ್ಲಿ ರಾಶಿ ರಾಶಿ ಕಸ

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಲ್ಲೂ ದುರ್ವಾಸನೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 2:47 IST
Last Updated 16 ಮೇ 2022, 2:47 IST
ಬಿಡದಿಯ ಪುರಸಭೆ ವ್ಯಾಪ್ತಿಯಲ್ಲಿ ರಾಶಿ ರಾಶಿ ಕಸ
ಬಿಡದಿಯ ಪುರಸಭೆ ವ್ಯಾಪ್ತಿಯಲ್ಲಿ ರಾಶಿ ರಾಶಿ ಕಸ   

ಬಿಡದಿ: ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಕಸ ಸಾಗಾಣಿಕೆ ವಿಳಂಬವಾಗುತ್ತಿದ್ದು, ವಾರ್ಡ್‌ವೊಂದಕ್ಕೆ ಸರಿಸುಮಾರು ಒಂದು ಟನ್‌ನಂತೆ 23 ಟನ್‌ ಕಸದ ರಾಶಿ ರಾಶಿಯಾಗಿ ಬಿದ್ದಿದೆ.

ಐದಾರು ವರ್ಷಗಳಿಂದಲೂ ಕಸ ಸಾಗಾಣಿಕೆ ಸಮಸ್ಯೆ ಇದ್ದು, ಕಸ ವಿಲೇವಾರಿಗೆ ಇಲ್ಲಿಯವರೆಗೂ ಯಾವುದೇ ನಿರ್ದಿಷ್ಟವಾದ ಸ್ಥಳವನ್ನು ಗುರುತಿಸಲು ಪುರಸಭೆಯು ವಿಫಲವಾಗಿದೆ. ಜನಪ್ರತಿನಿಧಿಗಳು ಕೂಡ ಇದರ ಬಗ್ಗೆ ಕಾಳಜಿ ವಹಿಸದೇ ಇರುವುದು ದುರದುಷ್ಟಕರ.

ನಾಲ್ಕು ತಿಂಗಳಿಂದ ಚುನಾಯಿತ ಪ್ರತಿನಿಧಿಗಳಿದ್ದರೂ ಅವರು ಪ್ರಮಾಣ ವಚನ ಸ್ವೀಕರಿಸದೇ ಅಧಿಕಾರ ಚಲಾಯಿಸಲು ಆಗುತ್ತಿಲ್ಲ. ಬಿಡದಿ ಪಟ್ಟಣದಲ್ಲಿ ಸುಮಾರು 20 ಸಾವಿರ ಹೆಚ್ಚು ಜನರು ವಾಸವಿದ್ದು, ಕಸ ವಿಲೇವಾರಿವಾಗದೆ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಾಗರಿಕರು ಕಸವನ್ನು ರಸ್ತೆಯಲ್ಲಿ ಹಾಕುತ್ತಿದ್ದಾರೆ. ಹೀಗಾಗಿ ಬಿಡದಿ ಪಟ್ಟಣವು ಈಗ ಕಸದ ರಾಶಿಯಿಂದ ದುರ್ವಾಸನೆಯಿಂದ ಕೂಡಿದೆ.

ADVERTISEMENT

‘ಬಿಡದಿ ಪಟ್ಟಣವು ಬೆಂಗಳೂರಿಗೆ ಹತ್ತಿರದಲ್ಲಿದೆ. ಅಲ್ಲದೇ ಬಿಡದಿ ಕೈಗಾರಿಕಾ ಪ್ರದೇಶವು ಪಟ್ಟಣದ ವ್ಯಾಪ್ತಿಯಲ್ಲಿದ್ದು, ಸಾವಿರಾರು ಜನ ಈ ಕೈಗಾರಿಕಾ ಪ್ರದೇಶಕ್ಕೆ ರಾಜ್ಯ ಹಾಗೂ ವಿವಿಧ ರಾಜ್ಯಗಳಿಂದ ಬರುತ್ತಾರೆ. ಅವರೆಲ್ಲ ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ’ ಎಂದು ನಾಗರಿಕರು ದೂರುತ್ತಾರೆ.

ಪುರಸಭೆ ಮುಖ್ಯಾಧಿಕಾರಿರಮೇಶ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ನಮಗೆ ಪ್ರಸ್ತುತ ಕಸ ಸಾಗಾಣಿಕೆಗೆ ಅಲ್ಪಸ್ವಲ್ಪ ತೊಂದರೆಯಾಗುತ್ತಿದೆ. ಪಟ್ಟಣದ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಗುರುತಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದರುವರಿಸುತ್ತಿದ್ದೇವೆ. ಸರ್ಕಾರಿ ಜಾಗವನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರಿ ಜಾಗವನ್ನು ಗುರುತಿಸಿದ ನಂತರ ಆ ಸ್ಥಳದಲ್ಲಿ ಕೂಡಲೇ ಸಂಸ್ಕರಣ ಘಟಕವನ್ನು ಮಾಡಲಾಗುತ್ತದೆ’ ಎಂದರು.

ವಾರ್ಡ್ ನಂ.19ರ ಸದಸ್ಯೆ ಪದ್ಮ ಬೆಟ್ಟಸ್ವಾಮಿ ಮಾತನಾಡಿ, ‘ಈಗಾಗಲೇ ಪುರಸಭೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅಬ್ಬನಕುಪ್ಪೆಯಾದ್ಯಂತ ಹೆಚ್ಚು ಕೈಗಾರಿಕಾ ಪ್ರದೇಶಗಳಿದ್ದು, ಈ ಪ್ರದೇಶದಲ್ಲಿ ಕಸ ಮುಕ್ತ ವಾರ್ಡ್‌ ಅನ್ನಾಗಿ ಮಾಡಲು ಸೂಚಿಸಲಾಗಿದೆ. ಕಸವನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದ್ದು, ಸಾರ್ವಜನಿಕರು ಹಾಗೂ ಮಕ್ಕಳಿಗೆ ನಿರ್ಭೀತ ವಾತಾವರಣ ನಿರ್ಮಿಸುವಂತೆ ಮುಖ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.