ರಾಮನಗರ: ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಉಪನಗರಗಳನ್ನು ನಿರ್ಮಿಸುವ ಹೊಣೆಗಾರಿಕೆ ಸರ್ಕಾರದ್ದು. ಆ ನಿಟ್ಟಿನಲ್ಲಿ ಬೆಂಗಳೂರಿನಾಚೆ ನಗರವನ್ನು ವಿಸ್ತರಿಸಲು ಯೋಜನೆಗಳನ್ನು ಸರ್ಕಾರ ರೂಪಿಸುತ್ತಲೇ ಬಂದಿರುವ ಸರ್ಕಾರ 19 ವರ್ಷಗಳ ಹಿಂದೆ ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಘೋಷಿಸಿತು.
2006ರಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಉಪನಗರಗಳ ನಿರ್ಮಾಣದ ಯೋಜನೆಗೆ ಅಡಿಪಾಯ ಹಾಕಿದರು. ರಾಮನಗರ ತಾಲ್ಲೂಕಿನ ಬಿಡದಿ ಜೊತೆಗೆ ಕನಕಪುರ ತಾಲ್ಲೂಕಿನ ಸಾತನೂರು, ಮಾಗಡಿಯ ಸೋಲೂರು ಹಾಗೂ ಹೊಸಕೋಟೆಯ ನಂದಗುಡಿಯಲ್ಲೂ ಸಮಗ್ರ ಉಪನಗರ ನಿರ್ಮಾಣಕ್ಕೆ ಅನುಮೋದನೆ ನೀಡಿದರು.
ನನೆಗುದಿಗೆ: ಕುಮಾರಸ್ವಾಮಿ ಅವರು ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ 10 ಗ್ರಾಮಗಳನ್ನು ಒಳಗೊಂಡ 9,178.29 ಎಕರೆ ಪ್ರದೇಶದಲ್ಲಿ ಬಿಡದಿ ಉಪನಗರವನ್ನು ಮೊದಲಿಗೆ ಪ್ರಾಯೋಗಿಕವಾಗಿ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು 2007ರಲ್ಲಿ ಅಧಿಸೂಚನೆ ಹೊರಡಿಸಿದ್ದರು.
ಇದೇ ಸಂದರ್ಭದಲ್ಲಿ ಸರ್ಕಾರ ಪತನಗೊಂಡು ಎಚ್‌ಡಿಕೆ ಅಧಿಕಾರ ಕಳೆದುಕೊಂಡರು. ನಂತರ ಬಿಜೆಪಿ, ಕಾಂಗ್ರೆಸ್, ಕಾಂಗ್ರೆಸ್–ಜೆಡಿಎಸ್ ಮೈತ್ರಿ, ಬಿಜೆಪಿ ಅಧಿಕಾರಕ್ಕೇರಿದರೂ ಯೋಜನೆ ಸಾಕಾರಕ್ಕೆ ಗಮನ ಹರಿಸಲಿಲ್ಲ. ವಿವಿಧ ಕಾರಣಗಳಿಗಾಗಿ ಯೋಜನೆ ನನೆಗುದಿಗೆ ಬಿದ್ದಿತು. 19 ವರ್ಷಗಳಿಂದ ಮೇಲಕ್ಕೆಳದ ಉಪನಗರ ಯೋಜನೆಗೆ 2023ರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮರುಜೀವ ಕೊಟ್ಟಿದೆ.
ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎರಡು ದಶಕದ ಹಿಂದಿನ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ. ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲು ಹೆಜ್ಜೆ ಇಟ್ಟಿರುವ ಅವರೀಗ, ಬಿಡದಿ ಉಪನಗರ ನಿರ್ಮಾಣವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.
ಕೆಂಪು ವಲಯ: ಬಿಡದಿ ಸಮಗ್ರ ಉಪನಗರ ಯೋಜನೆಗೆ 2007ರಲ್ಲಿ ಅಧಿಸೂಚನೆ ಹೊರಡಿಸಿದ 10 ಗ್ರಾಮಗಳ 9,178 ಎಕರೆಯನ್ನು ಕೆಂಪು ವಲಯ ಎಂದು ಗುರುತಿಸಲಾಯಿತು. ಕೈಗಾರಿಕೆ, ವಾಣಿಜ್ಯ, ವಹಿವಾಟು ಸೇರಿದಂತೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಅನುಮತಿ ಇಲ್ಲದೆ ಮಾಡುವಂತಿಲ್ಲ ಎಂದು ಆದೇಶಿಸಲಾಯಿತು.
ಅಂದಿನಿಂದಲೂ ಈ ಭಾಗ ಯಥಾಸ್ಥಿತಿಯಲ್ಲಿದ್ದು, ಜನರು ಜಮೀನು ಮಾರಾಟ ಸೇರಿದಂತೆ ಬೇರಾವುದೇ ಚಟುವಟಿಕೆ ನಡೆಸಲಾಗದೆ ತೊಂದರೆ ಅನುಭವಿಸುತ್ತೇ ಬಂದಿದ್ದಾರೆ. ವರ್ಷಗಳು ಉರುಳಿದರೂ ಯೋಜನೆಯನ್ನು ಸಾಕಾರಗೊಳಿಸದ ಸರ್ಕಾರ, ಅಧಿಸೂಚನೆಗೆ ಒಳಪಟ್ಟಿದ್ದ ಭೂಮಿಯನ್ನು ಡಿನೋಟಿಫೈ ಕೂಡ ಮಾಡಿರಲಿಲ್ಲ. ಇದೀಗ, ಸರ್ಕಾರ ಜಿಬಿಡಿಎ ಮೂಲಕ ಯೋಜನೆ ಕಾರ್ಯಗತಕ್ಕೆ ಮುಂದಾಗಿದೆ.
ಮಾರ್ಚ್‌ನಲ್ಲಿ ಅಧಿಸೂಚನೆ:
ಯೋಜನೆಗಾಗಿ ಈಗಾಗಲೇ ಗುರುತಿಸಿರುವ 9 ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಜಿಬಿಡಿಎ) ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿದೆ. ಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳ ಮಾಲೀಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಆಕ್ಷೇಪಣೆಗಳನ್ನು ಪರಿಶೀಲಿಸಿ, ಪ್ರತಿಯೊಬ್ಬರಿಂದಲೂ ಅಹವಾಲು ಆಲಿಸಿದ ಬಳಿಕ ಪರಿಹಾರ ಮತ್ತು ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎನ್ನುತ್ತವೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಗಳು.
ಬಿಡದಿಯಲ್ಲೇ ಉಪನಗರ ಯಾಕೆ?
ರಾಜಧಾನಿಗೆ ಸಮೀಪವಿರುವ ಎಲ್ಲಾ ಭಾಗಗಳಿಗೆ ಹೋಲಿಸಿದರೆ ಬಿಡದಿಯು ನವ ಬೆಂಗಳೂರು ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಿದೆ. ರಾಜಧಾನಿಯು ಒಂದು ಕಡೆಗೆ ಆಂಧ್ರಪ್ರದೇಶ ಮತ್ತೊಂದು ಕಡೆಗೆ ತಮಿಳುನಾಡು ಗಡಿವರೆಗೂ ಬೆಳೆದು ನಿಂತಿದೆ. ಒಂದು ಭಾಗದಲ್ಲಿ ದೇವನಹಳ್ಳಿ ಮತ್ತೊಂದು ಕಡೆ ಹೊಸೂರಿನವರೆಗೆ ವಿಸ್ತರಿಸಿದೆ. ಇದರಾಚೆಗೆ ಏನೇ ಬೆಳವಣಿಗೆಯಾದರೂ ಅದು ಪರ ರಾಜ್ಯಗಳಿಗೆ ಹೆಚ್ಚು ಅನುಕೂಲ. ಅದೇ ದಕ್ಷಿಣ ಭಾಗದ ಬಿಡದಿಯಲ್ಲಿ ಉಪನಗರ ನಿರ್ಮಾಣವಾದರೆ ಬೆಂಗಳೂರು ವಿಸ್ತರಣೆ ಜೊತೆಗೆ ಅಭಿವೃದ್ಧಿಗೂ ಹೊಸ ಇಂಬು ಸಿಗುತ್ತದೆ ಎಂಬ ಕಾರಣಕ್ಕೆ ಬಿಡದಿಯನ್ನು ಆಯ್ಕೆ ಮಾಡಲಾಗಿದೆ ಎನ್ನುತ್ತರೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಗಳು.
ಉತ್ತಮ ರೈಲು ಸಂಪರ್ಕ ವ್ಯವಸ್ಥೆ ಹೊಂದಿರುವ ಬಿಡದಿಯ ಒಂದು ಕಡೆ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ–275 ಮತ್ತೊಂದೆಡೆ ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ–948 ಹಾದು ಹೋಗಿವೆ. ಯೋಜನೆಗೆ ಗುರುತಿಸಿರುವ ಪ್ರದೇಶದಲ್ಲೇ ಉಪನಗರ ವರ್ತುಲ ರಸ್ತೆ (ಎಸ್‌ಟಿಆರ್‌ಆರ್) ಕೂಡ ನಿರ್ಮಾಣವಾಗಲಿದೆ. ಯೋಜನಾ ಪ್ರದೇಶಕ್ಕೆ ಹೊಂದಿಕೊಂಡಂತೆ ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿವೆ. ಹಾಗಾಗಿ ನವ ಬೆಂಗಳೂರು ನಿರ್ಮಾಣಕ್ಕೆ ಇದಕ್ಕಿಂತ ಅತ್ಯುತ್ತಮವಾದ ಜಾಗ ಮತ್ತೊಂದಿಲ್ಲ. ಹಿಂದೆಯೇ ಉಪನಗರ ಯೋಜನೆ ಕಾರ್ಯಗತವಾಗಿದ್ದರೆ ಬೆಂಗಳೂರಿನ ಅಭಿವೃದ್ಧಿ ಚಹರೆಯಲ್ಲಿ ಇಷ್ಟೊತ್ತಿಗೆ ದೊಡ್ಡ ಬದಲಾವಣೆಯಾಗಿರುತ್ತಿತ್ತು ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.