ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೋಬಳಿಯ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿರ್ಮಾನವಾಗಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಕೆಲಸಕ್ಕೆ ಬುಧವಾರ ಕರಿಕಲ್‌ಕೊಡ್ಡಿ ಗ್ರಾಮದಲ್ಲಿ ರೈತರ ತಡೆಯೊಡ್ಡಿದರು.
ಅಧಿಕಾರಿಗಳ ತಂಡ ಜೆಎಂಸಿ ಕೆಲಸಕ್ಕೆ ಬರಲಿದೆ ಎಂದು ಗೊತ್ತಾಗುತ್ತಿದ್ದಂತೆ, ರೈತರ ಗುಂಪು ಸ್ಥಳದಲ್ಲಿ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಯೋಜನೆಗೆ ಕೊಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದರು. ನಮಗೆ ಈ ಯೋಜನೆ ಬೇಡ. ಹಾಗಾಗಿ, ಅಧಿಕಾರಿಗಳು ನಮ್ಮ ಜಮೀನಿಗೆ ಕಾಲಿಡಬಾರದು ಎಂದು ತಡೆಯೊಡ್ಡಿದರು.
ವಿಷಯ ತಿಳಿದು ಪೊಲೀಸರ ದಂಡು ಸ್ಥಳಕ್ಕೆ ಬಂದಿತು. ಆಗ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ರೈತರ ಮನವೊಲಿಸಲು ಯತ್ನಿಸಿದರು. ಆದರೂ, ರೈತರು ಪಟ್ಟು ಬಿಡದೆ ಸ್ಥಳದಿಂದ ಹೊರಡುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ಈ ವೇಳೆ, ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದರೂ ಆಗಲಿಲ್ಲ. ಪರಸ್ಪರ ಮಾತಿನ ಚಕಮಕಿ ಜೊತೆಗೆ ತಳ್ಳಾಟ ಸಹ ಶುರುವಾಯಿತು.
ಕಡೆಗೆ ಕೆಲ ಅಧಿಕಾರಿಗಳು ಸ್ಥಳದಿಂದ ಹೊರಟರು. ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಣ್ಣಾಗುತ್ತಿದ್ದಂತೆ ಯೋಜನೆಗೆ ಒಪ್ಪಿರುವ ರೈತರಿಗೆ ಸೇರಿದ ಜಮೀನುಗಳಲ್ಲಿ ಅಧಿಕಾರಿಗಳ ತಂಡವು ಪೊಲೀಸ್ ಸರ್ಪಗಾವಲಿನಲ್ಲಿ ಜೆಎಂಸಿ ಕಾರ್ಯ ಮುಗಿಸಿತು. ಬಿಡದಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್, ಇತರ ಸಿಬ್ಬಂದಿ, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು.
ಸಭೆ ನಡೆಸಿಲ್ಲ: ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವ ಜಿಬಿಡಿಎ ಇದುವರೆಗೆ ಭೂಮಿ ಕಳೆದುಕೊಳ್ಳುವ ರೈತರ ಜೊತೆ ಸಭೆ ನಡೆಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸಹ ರೈತರಿಗೆ ಯೋಜನೆ ಬೇಕೇ ಬೇಡವೇ ಎಂಬುದನ್ನು ಆಲಿಸಿಲ್ಲ. ಇವರ ಇಷ್ಟಕ್ಕೆ ತಕ್ಕಂತೆ, ಫಲವತ್ತಾದ ಭೂಮಿಯಲ್ಲಿ ಉಪನಗರ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಫಲವತ್ತಾದ ಭೂಮಿಯಲ್ಲೇ ಉಪನಗರ ನಿರ್ಮಾಣ ಮಾಡಬೇಕೇ? ನಾವು ಇಲ್ಲಿ ತಲೆಮಾರುಗಳಿಂದ ಕೃಷಿ ಮತ್ತು ಹೈನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಯೋಜನೆಯಿಂದ ಎಲ್ಲವನ್ನೂ ಕಳೆದುಕೊಳ್ಳಲಿದ್ದೇವೆ. ಇವರು ಕೊಡುವ ಪರಿಹಾರ ಎಷ್ಟು ದಿನ ತಾನೇ ಇರಲು ಸಾಧ್ಯ? ಕಡೆಗೆ ನಾವು ಬೀದಿಗೆ ಬೀಳುತ್ತೇವೆ. ಹಾಗಾಗಿ, ಯಾವ ಉಪನಗರವೂ ಬೇಡ. ನಮ್ಮ ಜಮೀನನ್ನು ನಮಗೆ ಬಿಟ್ಟು ಬಿಡಿ ಎಂದು ಆಗ್ರಹಿಸಿದರು.
ಹೋರಾಟಕ್ಕೆ ದೇವೇಗೌಡರ ಬೆಂಬಲ
28ಕ್ಕೆ ಧರಣಿ ಸ್ಥಳಕ್ಕೆ ಭೇಟಿ ‘ಉಪನಗರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ. ರಾಜ್ಯ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಮಾಜಿ ಪ್ರಧಾನಿ ಹಾಗೂ ಸಂಸದರಾದ ಎಚ್.ಡಿ. ದೇವೇಗೌಡ ಅವರು ಸೆ. 28ರಂದು ಭೇಟಿ ನೀಡಲಿದ್ದಾರೆ. ಯಾವುದೇ ಕಾರಣಕ್ಕೂ ಈ ಭಾಗದ ರೈತರ ಭೂಮಿಯನ್ನು ಕಸಿದುಕೊಳ್ಳಲು ಬಿಡುವುದಿಲ್ಲ’ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಹೇಳಿದರು. ಯೋಜನೆ ವಿರೋಧಿಸಿ ಭೈರಮಂಗಲದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ನಮ್ಮ ಪಕ್ಷವು ರೈತರ ಜೊತೆಗೆ ನಿಲ್ಲಲಿದೆ. 28ರಂದು ದೇವೇಗೌಡರು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಜನೆ ರೂಪಿಸಿದ್ದೇ ಎಚ್.ಡಿ. ಕುಮಾರಸ್ವಾಮಿ ಅವರು ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಸ್ವತಃ ಕುಮಾರಸ್ವಾಮಿ ಅವರೇ ಉತ್ತರ ನೀಡಲಿದ್ದಾರೆ. ಅನಾರೋಗ್ಯದಿಂದಾಗಿ ಅವರು ಸ್ಥಳಕ್ಕೆ ಬರುವುದಿಲ್ಲ. ಆದರೆ ಆನ್‌ಲೈನ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.