ಬಿಡದಿ: ಬೆಂಗಳೂರು ಮೈಸೂರು ಹೆದ್ದಾರಿಯ ಫುಟ್ ಪಾತ್ ಮೇಲಿದ್ದ ಅಂಗಡಿಗಳನ್ನು ತೆರವು ಮಾಡಲಾಯಿತು.
ಬಿಡದಿ ಪಟ್ಟಣದ ಜನ ನಿಬಿಡ ಸ್ಥಳವಾದ ಬೆಂಗಳೂರು ಮೈಸೂರು ರಸ್ತೆಯ ಫುಟ್‌ಪಾತ್ ಮೇಲೆ ಹಲವು ವರ್ಷಗಳಿಂದ ಅಂಗಡಿಗಳೇ ರಾರಾಜಿಸುತ್ತಿದ್ದವು. ಗುರುವಾರ ಸಂಜೆ ಏಕಾಏಕಿ ಬಂದ ಪುರಸಭೆ ಅಧಿಕಾರಿಗಳು ಪಶು ವೈದ್ಯಕೀಯ ಆಸ್ಪತ್ರೆಯ ಒಂದು ಬದಿಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿದರು. ಅಂಗಡಿ ಮಾಲೀಕರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಎದುರಾಯಿತು. ನಂತರ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ತಿಳಿಹೇಳಿ ಅಂಗಡಿಗಳನ್ನು ತೆರವುಗೊಳಿಸಿದರು.
ಪುರಸಭಾ ಮುಖ್ಯ ಅಧಿಕಾರಿ ರಮೇಶ್ ಮಾತನಾಡಿ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಮಾಡಲು ಶಾಸಕ ಬಾಲಕೃಷ್ಣ ಹಾಗೂ ಸ್ಥಳೀಯ ಮುಖಂಡರು ತೀರ್ಮಾನಿಸಿದ್ದರಿಂದ ಅಂಗಡಿಗಳನ್ನು ತೆರವುಗೊಳಿಸುತ್ತೇವೆ ಎಂದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆರ್‌ಟಿಐ ಕಾರ್ಯಕರ್ತ ಪ್ರಮೋದ್, ಹಲವು ವರ್ಷಗಳಿಂದ ಇಲ್ಲಿ ಅಂಗಡಿಗಳನ್ನು ನಡೆಸಿ, ಅದರಿಂದಲೇ ಕುಟುಂಬವನ್ನು ಸಲಹುತ್ತಿರುವ ವ್ಯಾಪಾರಿಗಳು ಇದರಿಂದ ಬೀದಿಗೆ ಬೀಳುತ್ತಾರೆ. ಹೀಗೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸುವ ಬದಲು ಅವರಿಗೆ ಬೇರೆ ಕಡೆ ಸ್ಥಳ ನಿಗದಿ ಮಾಡಿ ನಂತರ ತೆರವು ಕಾರ್ಯ ಮಾಡಬೇಕಿತ್ತು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.