
ಆನೇಕಲ್: ತಾಲ್ಲೂಕಿನ ಬಿದರಗುಪ್ಪೆಯಲ್ಲಿ ನಂಜುಂಡೇಶ್ವರ, ಗಾಯತ್ರಿ ಮತ್ತು ಮಹಾಗಣಪತಿ ರಥೋತ್ಸವ ಭಾನುವಾರ ವೈಭವದಿಂದ ನೆರವೇರಿತು. ವೈಭವದ ರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಸಾಕ್ಷಿಯಾದರು.
ಬಿದರಗುಪ್ಪೆ ಜಾತ್ರೆಯು ಮೂರು ತೇರುಗಳ ಸಂಗಮವಾಗಿದ್ದು ಸಹಸ್ರಾರು ಭಕ್ತರು ಈ ವೈಭವವನ್ನು ಕಣ್ತುಂಬಿಕೊಂಡರು. ನಂಜುಂಡೇಶ್ವರನಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು.
ಉತ್ಸವ ಮೂರ್ತಿಗಳೊಂದಿಗೆ ದೇವಾಲಯ ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರ ತೇರುಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಧಾರ್ಮಿಕ ವಿಧಿವಿಧಾನ ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೂರು ಪ್ರತ್ಯೇಕ ತೇರುಗಳಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಉರಿಬಿಸಿಲಿನ ನಡುವೆಯೂ ಭಕ್ತರು ಉತ್ಸಾಹದಿಂದ ತೇರುಗಳನ್ನು ಎಳೆದರು.
ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಜನರು ಭಕ್ತಿಯಿಂದ ಜಯಘೋಷ ಮಾಡಿದರು. ದವನ ಚುಚ್ಚಿದ ಬಾಳೆಹಣ್ಣುಗಳನ್ನು ತೇರಿಗೆ ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು. ತೇರುಗಳು ಗ್ರಾಮದ ಬೀದಿಗಳಲ್ಲಿ ಬರುತ್ತಿದ್ದಂತೆ ಭಕ್ತರು ಆರತಿ ಎತ್ತಿ ಪೂಜೆ ಮಾಡಿದರು.
ವೀರಗಾಸೆ, ತಮಟೆ, ಗಾರುಡಿ ಗೊಂಬೆ, ನಾದಸ್ವರ ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಅರವಂಟಿಕೆ ಸ್ಥಾಪಿಸಿ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಂಜುಂಡೇಶ್ವರ ಸ್ವಾಮಿಯ ರಾವಣ ವಾಹನೋತ್ಸವ, ಜ.26ರಂದು ಅಶ್ವವಾಹನೋತ್ಸವ, ಚಿತ್ರಗೋಪುರೋತ್ಸವ ಮತ್ತು ಬಿರದಗುಪ್ಪೆ ದೊಡ್ಡಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.