
ಬಿಡದಿ (ರಾಮನಗರ): ‘ವಾಟರ್‌ಮ್ಯಾನ್‌ಗಳ ₹1.65 ಕೋಟಿ ಬಾಕಿ ವೇತನ ಬಿಡುಗಡೆ ವಿಷಯಕ್ಕೂ ನನಗೂ ಸಂಬಂಧವಿಲ್ಲ. ಪುರಸಭೆ ಅಧಿಕಾರವಿರುವುದು ಜೆಡಿಎಸ್ ಕೈಯಲ್ಲಿದ್ದು, ಹಣ ಬಿಡುಗಡೆಗೆ ಸ್ವತಃ ಅಧ್ಯಕ್ಷರೇ ಸಹಿ ಮಾಡಿದ್ದಾರೆ. ಜನಪರವಾಗಿ ಕೆಲಸ ಮಾಡುತ್ತಿರುವ ನನ್ನ ರಾಜಕೀಯ ಏಳಿಗೆ ಸಹಿಸದೆ ಕಿಕ್‌ಬ್ಯಾಕ್ ಪಡೆದಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಇಲ್ಲಿನ ಪುರಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಸಿ. ಉಮೇಶ್ ತಿರುಗೇಟು ನೀಡಿದರು.
‘ಅಧ್ಯಕ್ಷರೇ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿರುವುದು ಹ್ಯಾಸ್ಯಾಸ್ಪದ. ಅವರೊಂದಿಗೆ ನಮ್ಮ ಪಕ್ಷದ ಸದಸ್ಯರು ಹಾಗೂ ಮುಖಂಡರು ಸಹ ಸೇರಿಕೊಂಡಿದ್ದಾರೆ. ನಾನು ಕಿಕ್‌ಬ್ಯಾಕ್ ಪಡೆದಿರುವುದಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯ್ಲಲಿ ಸವಾಲು ಹಾಕಿದರು.
‘ನನೆಗುದಿಗೆ ಬಿದ್ದಿದ್ದ ನೌಕರರ ಬಾಕಿ ವೇತನ ಬಿಡುಗಡೆಗೆ ನಾನೂ ಶ್ರಮಿಸಿದ್ದೇನೆ. ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಗಮನಕ್ಕೆ ತಂದು ಒತ್ತಡ ಹೇರಿದ್ದೇನೆ. ಹರಿಪ್ರಸಾದ್ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಸದಸ್ಯರ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ನೀಡಲಾಗಿತ್ತು. ಆಗ ಮೊತ್ತದ ಕುರಿತು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಆಕ್ಷೇಪಿಸಿದ್ದೆ’ ಎಂದು ಹೇಳಿದರು.
‘ಕೋರ್ಟ್ ಆದೇಶದ ಮೇರೆಗೆ ಕಾಲಮಿತಿಯಲ್ಲಿ ವೇತನ ಬಿಡುಗಡೆ ಮಾಡಬೇಕಾದ ಒತ್ತಡ ಮುಖ್ಯಾಧಿಕಾರಿಗೆ ಇತ್ತು. ಅದಕ್ಕಾಗಿ ಅವರು, ಎಲ್ಲಾ ಸದಸ್ಯರು ವೇತನ ಬಿಡುಗಡೆಗೆ ಒಪ್ಪಿರುವುದರಿಂದ ನೀವು ಮಾಡಿರುವ ಆಕ್ಷೇಪಣೆ ಹಿಂಪಡೆಯುವಂತೆ ಮನವಿ ಮಾಡಿದ್ದರು. ಅದಕ್ಕೆ ಒಪ್ಪಿ ಪತ್ರ ಬರೆದಿದ್ದೆ. ಬಳಿಕ ಅವರು ನಿಯಮಾನುಸಾರ ವೇತನ ಬಿಡುಗಡೆ ಮಾಡಿದ್ದಾರೆ’ ಎಂದು ತಿಳಿಸಿದರು.
‘ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ನಡುವೆ ಹೊಂದಾಣಿಕೆ ಇಲ್ಲದಿರುವುದೇ, ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ. ವಾಟರ್‌ಮ್ಯಾನ್ ಮಾಯಣ್ಣ ಮಹಿಳೆ ಜೊತೆ ಹಣ ಕೇಳುವಾಗ ಪ್ರಸ್ತಾಪವಾಗಿರುವ ಹೆಸರು ನನ್ನದಲ್ಲ. ನನ್ನ ವಿರುದ್ಧ ಆರೋಪ ಮಾಡಿರುವ ಸದಸ್ಯ ನಾಗಣ್ಣ, ತಮ್ಮ ವಾರ್ಡ್‌ನಲ್ಲಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಂದ ₹2 ಲಕ್ಷ ಲಂಚ ಪಡೆದಿದ್ದಾರೆ. ಅದಕ್ಕೆ ನನ್ನ ಬಳಿ ದಾಖಲೆ ಇದೆ. ಮುಖಂಡ ಬೆಟ್ಟಸ್ವಾಮಿ ಸೇರಿದಂತೆ ಇತರ ಸದಸ್ಯರು ಸಹ ತಮ್ಮ ವಾರ್ಡ್‌ನಲ್ಲಿ ಕಾಮಗಾರಿ ನಡೆಸುವುದಕ್ಕೆ ಲಂಚ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದ ಉಮೇಶ್, ನಾಗಣ್ಣ ಹಾಗೂ ಕೆಲ ಸದಸ್ಯರ ಮೊಬೈಲ್ ಸಂಭಾಷಣೆಯ ತುಣುಕುಗಳನ್ನು ಕೇಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆಯ 18 ವಾಟರ್‌ಮ್ಯಾನ್‌ಗಳು ಹಾಗೂ ಉಮೇಶ್ ಬೆಂಬಲಿಗರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.