ADVERTISEMENT

ಈಗಲ್ಟನ್‌ ರೆಸಾರ್ಟ್‌ ಬುಕ್: ಮತ್ತೆ ‘ಬಿಗ್‌ ಬಾಸ್’ ಸ್ಪರ್ಧಿಗಳ ಸ್ಥಳಾಂತರ?

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:23 IST
Last Updated 9 ಅಕ್ಟೋಬರ್ 2025, 0:23 IST
ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಲು ಬುಧವಾರ ಕಚೇರಿ ಬಳಿ ಕಾದು ಕುಳಿತಿದ್ದ ಜಾಲಿವುಡ್ ಸ್ಟುಡಿಯೊ ಆಡಳಿತ ಮಂಡಳಿ ಪ್ರತಿನಿಧಿಗಳು
ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಲು ಬುಧವಾರ ಕಚೇರಿ ಬಳಿ ಕಾದು ಕುಳಿತಿದ್ದ ಜಾಲಿವುಡ್ ಸ್ಟುಡಿಯೊ ಆಡಳಿತ ಮಂಡಳಿ ಪ್ರತಿನಿಧಿಗಳು   

ರಾಮನಗರ: ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಮಂಗಳವಾರ ಬೀಗ ಜಡಿದ ನಂತರ ಸಮೀಪದ ಈಗಲ್ಟನ್ ರೆಸಾರ್ಟ್‌ಗೆ ತೆರಳಿದ್ದ ‘ಬಿಗ್ ಬಾಸ್’ ರಿಯಾಲಿಟಿ ಷೋ ಸ್ಪರ್ಧಿಗಳನ್ನು ಮತ್ತೆ ಬೇರೆಡೆಗೆ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಿದೆ. 

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಿಗ್‌ಬಾಸ್‌ ಮನೆ ಖಾಲಿ ಮಾಡಿಸಿ ಸ್ಪರ್ಧಿಗಳನ್ನು ಹೊರಕ್ಕೆ ಕಳಿಸಿದ್ದರು. ಷೋ ಆಯೋಜಕರು ಕೂಡಲೇ ಎಲ್ಲರಿಗೂ ಈಗಲ್ಟನ್ ರೆಸಾರ್ಟ್‌ನಲ್ಲಿ ಉಳಿಯಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು.

ಈಗಲ್ಟನ್‌ ರೆಸಾರ್ಟ್‌ನಲ್ಲಿ ಈಗಾಗಲೇ ಪೂರ್ವನಿಗದಿತ ಬೇರೊಂದು ಕಾರ್ಯಕ್ರಮ ಇರುವುದರಿಂದ ಎಲ್ಲಾ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಹಾಗಾಗಿ ಸ್ಪರ್ಧಿಗಳಿಗೆ ಬೇರೆ ಕಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಿ ಎಂದು ರೆಸಾರ್ಟ್‌ನವರು ಆಯೋಜಕರಿಗೆ ತಿಳಿಸಿದ್ದಾರೆ.

ADVERTISEMENT

ಹಾಗಾಗಿ, ಷೋ ಆಯೋಜಕರು ಸ್ಪರ್ಧಿಗಳನ್ನು ಸಮೀಪದ ಬೇರೆ ಹೋಟೆಲ್ ಅಥವಾ ರೆಸಾರ್ಟ್‌ಗೆ ರಾತ್ರಿ ಸ್ಥಳಾಂತರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಧಿಕಾರಿ ಭೇಟಿ–ಕಾಲಾವಕಾಶ ಕೋರಿಕೆ: 

ಈ ಬೆಳವಣಿಗೆಯ ನಡುವೆಯೇ ಜಾಲಿವುಡ್ ಆಡಳಿತ ಮಂಡಳಿ ಪ್ರತಿನಿಧಿಗಳು ಬೆಳಗ್ಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿದ್ದರು. ನಿಯಮ ಉಲ್ಲಂಘನೆ ಸರಿಪಡಿಸಿಕೊಳ್ಳಲು 15 ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಲ್ಲಿ ತಿಳಿಸಿರುವ ಎಲ್ಲ ಲೋಪದೋಷ ಸರಿಪಡಿಸಿಕೊಳ್ಳುತ್ತೇವೆ. ಆ ಕುರಿತು ಮಂಡಳಿಗೆ ವರದಿ ಕೂಡ ಸಲ್ಲಿಸುತ್ತೇವೆ ಎಂದು ಮನವಿ ಸಲ್ಲಿದರು.

ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬಿಗ್‌ಬಾಸ್‌ ರಿಯಾಲಿಟಿ ಷೋ ಕೂಡ ನಡೆಯುತ್ತಿದೆ. ಸ್ಟುಡಿಯೊಗೆ ಬೀಗ ಹಾಕಿರುವುದರಿಂದ ಎಲ್ಲರ ಕೆಲಸಕ್ಕೆ ತೊಂದರೆಯಾಗಲಿದೆ. ಹಾಗಾಗಿ ಷರತ್ತುಬದ್ಧ  ಅನುಮತಿ ನೀಡಿ ಎಂದು ಕೋರಿದರು.

‘ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ನಾವು ಪಾಲಿಸಿದ್ದೇವೆ. ಹಾಗಾಗಿ, ಮಂಡಳಿಗೆ ನೀವು ಮನವಿ ಮಾಡಿ. ಅವರು ‌ನೀಡುವ ಆದೇಶದಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಾಲಿವುಡ್ ಸ್ಟುಡಿಯೋದವರು ನಿಯಮ ಉಲ್ಲಂಘನೆ ಮಾಡಿರುವುದರಿಂದ ಬೀಗಮುದ್ರೆ ಹಾಕಲಾಗಿದೆ. ಇದರಲ್ಲಿ ವೈಯುಕ್ತಿಕವಾದದ್ದು ಏನೂ‌ ಇಲ್ಲ. ಒಂದು ವೇಳೆ ಸ್ಟುಡಿಯೊದಲ್ಲಿ ಏನಾದರೂ ಅವಘಡ ಸಂಭವಿಸಿದ್ದರೆ ಯಾರು ಹೊಣೆ? ಹಾಗಾಗಿ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ
ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ

ರೆಸಾರ್ಟ್‌ನಲ್ಲೇ ರಿಲ್ಯಾಕ್ಸ್! 

ಕಳೆದ ಹನ್ನೊಂದು ದಿನಗಳಿಂದ ಬಿಗ್ ಬಾಸ್ ಷೋನಲ್ಲಿ ತೊಡಗಿಸಿಕೊಂಡಿದ್ದ ಸ್ಪರ್ಧಿಗಳು ಈಗಲ್ಟನ್‌ ರೆಸಾರ್ಟ್‌ನಲ್ಲಿ ಇಡೀ ದಿನವನ್ನು ಆರಾಮವಾಗಿ ಕಳೆದರು. ಯಾವುದೇ ಶೂಟಿಂಗ್ ಇಲ್ಲದಿದ್ದರಿಂದ ರೆಸಾರ್ಟ್‌ ಒಳಗೆ ಓಡಾಡಿಕೊಂಡಿದ್ದರು. ಕೆಲವರು ಮಹಡಿ ಮೇಲೆ ಜನರಿಗೆ ಕಾಣಿಸಿಕೊಂಡರು. ಸ್ಪರ್ಧಿಗಳು ಜನರಿಗೆ ಕಾಣಿಸಿಕೊಳ್ಳದಂತೆ ಆಯೋಜಕರು ಅವರನ್ನು ಒಳಗೆ ಹಿಡಿದಿಡುವ ಪ್ರಯತ್ನದಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.