ರಾಮನಗರ: ಜನಪ್ರಿಯ ‘ಬಿಗ್ ಬಾಸ್’ ರಿಯಾಲಿಟಿ ಷೋ ಮನೆ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಹಾಕಿದ್ದ ಬೀಗಮುದ್ರೆ ತೆಗೆಯುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ರಾತ್ರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ರಾತ್ರಿ 11.39ಕ್ಕೆ ‘ಎಕ್ಸ್’ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಡಿಸಿಎಂ, ‘ಬಿಗ್ ಬಾಸ್ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.
ಸುದೀಪ್ ಧನ್ಯವಾದ: ಡಿಸಿಎಂ ಪೋಸ್ಟ್ ಬೆನ್ನಲ್ಲೇ ಷೋ ನಿರೂಪಕ ನಟ ಕಿಚ್ಚ ಸುದೀಪ್, ‘ಸಕಾಲಕ್ಕೆ ನನ್ನ ಕರೆಗೆ ಸ್ಪಂದಿಸಿದ ಗೌರವಾನ್ವಿತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಈ ಗೊಂದಲದಲ್ಲಿ ಬಿಗ್ ಬಾಸ್ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದ ನಲಪಾಡ್ ಅವರಿಗೂ ಧನ್ಯವಾದ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ರಾತ್ರಿ 11.42ಕ್ಕೆ ಪೋಸ್ಟ್ ಹಾಕಿದ್ದಾರೆ.
ಡಿಸಿಎಂ ಸೂಚನೆಯ ಬೆನ್ನಲ್ಲೇ ಕಂದಾಯ ಇಲಾಖೆಯ ಸಿಬ್ಬಂದಿ, ಜಾಲಿವುಡ್ ಸ್ಟುಡಿಯೋಸ್‌ಗೆ ತೆರಳಿ ಬೀಗಮುದ್ರೆ ತೆಗೆಯುವ ನಿರೀಕ್ಷೆ ಇದೆ. ಸದ್ಯ ಈಗಲ್ಟನ್ ರೆಸಾರ್ಟ್‌ನಲ್ಲಿರುವ ಬಿಗ್ ಬಾಸ್ ಸ್ಪರ್ಧಿಗಳು ಗುರುವಾರ ಸ್ಟುಡಿಯೊಗೆ ವಾಪಸಾಗಲಿದ್ದು, ಷೋ ಚಿತ್ರೀಕರಣ ಸರಾಗವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಜೆ ಲೆಕ್ಕಿಸದೆ ಬೀಗ: ನಿಯಮ ಉಲ್ಲಂಘನೆ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಾಲಿವುಡ್ ಮುಚ್ಚುವಂತೆ ಅ. 6ರಂದು ಜಿಲ್ಲಾಡಳಿಕ್ಕೆ ಸೂಚನೆ ನೀಡಿತ್ತು. ಮಾರನೇಯ ದಿನ ವಾಲ್ಮೀಕಿ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇದ್ದರೂ, ಜಿಲ್ಲಾಡಳಿತವು ಪೊಲೀಸರ ನೆರವಿನೊಂದಿಗೆ ಜಾಲಿವುಡ್‌ಗೆ ಬೀಗ ಹಾಕಿತ್ತು.
ಬಿಗ್ ಬಾಸ್ ಷೋ ಸ್ಥಗಿತಕ್ಕೆ ಸೂಚಿಸಿ, ಸ್ಪರ್ಧಿಗಳು ಸೇರಿದಂತೆ ಜಾಲಿವುಡ್‌ನಲ್ಲಿದ್ದ ಪ್ರವಾಸಿಗರು ಹಾಗೂ ಸಿಬ್ಬಂದಿಯನ್ನು ಸಹ ಹೊರಕ್ಕೆ ಕಳಿಸಿತ್ತು. ಜಿಲ್ಲಾಡಳಿತದ ಈ ದಿಢೀರ್ ನಿರ್ಧಾರದಿಂದಾಗಿ ಷೋ ಚಿತ್ರೀಕರಣ ಸ್ಥಗಿತಗೊಂಡಿತ್ತಲ್ಲದೆ, ಆಯೋಜಕರು ಸ್ಪರ್ಧಿಗಳಿಗೆ ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು.
ಕಾಲಾವಕಾಶ ಕೋರಿದ್ದರು: ನಿಯಮ ಉಲ್ಲಂಘನೆ ಸರಿಪಡಿಸಿಕೊಳ್ಳಲು 15 ದಿನ ಕಾಲಾವಕಾಶ ನೀಡುವಂತೆ ಜಾಲಿವುಡ್ ಆಡಳಿತ ಮಂಡಳಿಯವರು ಬುಧವಾರವಿಡೀ ಜಿಲ್ಲಾಧಿಕಾರಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದುಂಬಾಲು ಬಿದ್ದಿದ್ದರು.
ವಿಷಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರ ಅಂಗಳ ತಲುಪಿತ್ತು. ಕಾಲಾವಕಾಶ ನೀಡಬೇಕೋ ಬೇಡವೋ ಎಂಬ ಕುರಿತು ಡಿಸಿಎಂ ಮತ್ತು ಮಂಡಳಿ ಅಧ್ಯಕ್ಷರು ಭಿನ್ನ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಡೆಗೆ ಷೋ ನಿರೂಪಕ ಸುದೀಪ್ ಅವರು ಡಿಸಿಎಂ ಅವರಿಗೆ ಕರೆ ಮಾಡಿ, ಸಮಸ್ಯೆ ಬಗೆಹರಿಸಿಕೊಳ್ಳಲು ಜಾಲಿವುಡ್‌ಗೆ ಕಾಲಾವಕಾಶ ನೀಡುವ ಮೂಲಕ ಬಿಗ್ ಬಾಸ್ ಷೋ ಸರಾಗವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.
ಜಾಲಿವುಡ್ ಸ್ಟುಡಿಯೊದವರು ಮಂಡಳಿಯಿಂದ ಅನುಮೋದನೆ ಪಡೆಯದ ಹೊರತು ಸ್ಟುಡಿಯೊಗೆ ಹಾಕಿರುವ ಬೀಗಮುದ್ರೆಯನ್ನು ನಾವು ತೆಗೆಯಲು ಬರುವುದಿಲ್ಲ. ಈ ಕುರಿತು ಡಿಸಿಎಂ ಮಾಡಿರುವ ಪೋಸ್ಟ್ ಕುರಿತು ನನಗೆ ಗೊತ್ತಿಲ್ಲ– ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
‘ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳಿಂದ ಆಗಿರುವ ಸಮಸ್ಯೆ ಪರಿಹರಿಸಿಕೊಳ್ಳಲು ಸ್ಟುಡಿಯೋಸ್‌ಗೆ ಸಮಯ ನೀಡಲಾಗುವುದು. ಪರಿಸರ ಸಂರಕ್ಷಣೆ ವಿಷಯದಲ್ಲಿ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುವುದರ ಜೊತೆಗೆ ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ’ ಎಂದು ಡಿಸಿಎಂ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.